ವ್ಯಾಟಿಕನ್, ಏ.26 (DaijiworldNews/AA): ಸೋಮವಾರ ನಿಧನರಾದ ರೋಮನ್ ಕ್ಯಾಥೋಲಿಕ್ನ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆಯು ಅವರ ನೆಚ್ಚಿನ ಚರ್ಚ್ ಆದ ಡಿ ಸಾಂಟಾ ಮಾರಿಯಾ ಮ್ಯಾಗಿಯೋರ್ ಬೆಸಿಲಿಕಾದಲ್ಲಿ ವಿಶ್ವ ನಾಯಕರ ಸಮ್ಮುಖದಲ್ಲಿ ನೆರವೇರಿಸಲಾಯಿತು.

ಅಂತ್ಯಕ್ರಿಯೆಗೂ ಮುನ್ನ ಪೋಪ್ ಫ್ರಾನ್ಸಿಸ್ ಅವರ ಶವಪೆಟ್ಟಿಗೆಯನ್ನು ವ್ಯಾಟಿಕನ್ ಸಿಟಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಇನ್ನು ಅವರ ಶವಪೆಟ್ಟಿಗೆಯನ್ನು ವ್ಯಾಟಿಕನ್ನಿಂದ ಬೆಸಿಲಿಕಾಕ್ಕೆ ತರುವಾಗ ಬೀದಿಗಳಲ್ಲಿ ಸಾಲುಗಟ್ಟಿ ನಿಂತಿದ್ದ ಲಕ್ಷಾಂತರ ಜನರು ಪೋಪ್ ಫ್ರಾನ್ಸಿಸ್ ಅವರಿಗೆ ಅಂತಿಮ ನಮನ ಸಲ್ಲಿಸಿದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ಪ್ರಿನ್ಸ್ ವಿಲಿಯಮ್ಸ್, ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು, ಕೇಂದ್ರ ಸಂಸದೀಯ ವ್ಯವಹಾರಗಳು ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಜಾರ್ಜ್ ಕುರಿಯನ್ ಮತ್ತು ಗೋವಾ ವಿಧಾನಸಭೆಯ ಉಪ ಸ್ಪೀಕರ್ ಜೋಶುವಾ ಡಿಸೋಜಾ ಸೇರಿ ಸುಮಾರು 160 ದೇಶಗಳ ಗಣ್ಯರು ಅಂತಿಮ ದರ್ಶನ ಪಡೆದರು.
ರೋಮ್ ಚರ್ಚ್ ಒಳಗಿನ ಅಂತ್ಯಕ್ರಿಯೆ ಬಹಳ ಖಾಸಗಿ ಕಾರ್ಯಕ್ರಮವಾಗಿದ್ದು, ಅವರ ಹತ್ತಿರದವರಿಗೆ ಗೌರವ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿತ್ತು. ರೋಮ್ ಚರ್ಚ್ ನೊಳಗೆ ಪೋಪ್ ಫ್ರಾನ್ಸಿಸ್ ಅವರನ್ನು ಸಮಾಧಿ ಮಾಡಲಾಗುವುದು.