ವ್ಯಾಟಿಕನ್ ಸಿಟಿ, ಏ.21 (DaijiworldNews/AA): ಪೋಪ್ ಫ್ರಾನ್ಸಿಸ್(88) ಅವರು ವ್ಯಾಟಿಕನ್ ನಗರದಲ್ಲಿ ಸೋಮವಾರ ಮೃತಪಟ್ಟಿದ್ದಾರೆ.

ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಪೋಪ್ ಫ್ರಾನ್ಸಿಸ್ ಅವರನ್ನು ಇತ್ತೀಚೆಗೆ ನ್ಯುಮೋನಿಯಾದಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅವರು ವ್ಯಾಟಿಕನ್ನ ಕಾಸಾ ಸಾಂತಾ ಮಾರ್ಟಾದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಇನ್ನು ನಿನ್ನೆ, ಈಸ್ಟರ್ ಸಂಭ್ರಮದ ಸಂದರ್ಭದಲ್ಲಿ, ದೀರ್ಘ ಸಮಯದ ಬಳಿಕ ಜನರ ಮುಂದೆ ಕಾಣಿಸಿಕೊಂಡಿದ್ದರು.
"ಸೋಮವಾರ ಬೆಳಿಗ್ಗೆ 7:35 ಕ್ಕೆ ರೋಮ್ನ ಬಿಷಪ್ ಫ್ರಾನ್ಸಿಸ್ ಅವರು ತಮ್ಮ ಭೂಮಿಯನ್ನು ತೊರೆದು ತಮ್ಮ ತಂದೆಯ ಮನೆಗೆ ಮರಳಿದರು. ಅವರ ಇಡೀ ಜೀವನವು ಭಗವಂತನ ಮತ್ತು ಚರ್ಚ್ನ ಸೇವೆಗೆ ಸಮರ್ಪಿತವಾಗಿತ್ತು" ಎಂದು ಫಾರೆಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜೆಂಟೀನಾದಲ್ಲಿ ಜನಿಸಿದ ಪೋಪ್ ಫ್ರಾನ್ಸಿಸ್ ಅವರು 12 ವರ್ಷಗಳಿಗೂ ಹೆಚ್ಚು ಕಾಲ ಕ್ಯಾಥೋಲಿಕ್ ಚರ್ಚ್ ಅನ್ನು ಮುನ್ನಡೆಸಿದರು. ಈ ಸಮಯದಲ್ಲಿ ಅವರು ಹವಾಮಾನ ಬದಲಾವಣೆ, ಬಡತನ, ಅಂತರ್ಧರ್ಮ ಸಂವಾದ ಮತ್ತು ಚರ್ಚ್ನಲ್ಲಿ ಒಳಗೊಳ್ಳುವಿಕೆಯ ಬಗ್ಗೆ ತಮ್ಮ ಪ್ರಗತಿಪರ ದೃಷ್ಟಿಕೋನಗಳಿಗೆ ಹೆಸರುವಾಸಿಯಾಗಿದ್ದರು.
ಕೇವಲ ಒಂದು ದಿನದ ಹಿಂದೆ, ಈಸ್ಟರ್ ಭಾನುವಾರದ ಸಂದರ್ಭದಲ್ಲಿ ಪೋಪ್ ಫ್ರಾನ್ಸಿಸ್ ಧಾರ್ಮಿಕ ಸ್ವಾತಂತ್ರ್ಯ, ಸಹಿಷ್ಣುತೆ ಮತ್ತು ಶಾಂತಿಗಾಗಿ ಭಾವನಾತ್ಮಕ ಕರೆ ನೀಡಿದರು. ಸೇಂಟ್ ಪೀಟರ್ಸ್ ಬೆಸಿಲಿಕಾದ ಬಾಲ್ಕನಿಯಿಂದ 35,000 ಕ್ಕೂ ಹೆಚ್ಚು ಜನರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ತಮ್ಮ ಈಸ್ಟರ್ ಶುಭಾಶಯಗಳನ್ನು ತಿಳಿಸಿದರು.
ಸಂದೇಶದಲ್ಲಿ, ಅವರು ಧಾರ್ಮಿಕ ಸ್ವಾತಂತ್ರ್ಯ, ಚಿಂತನೆ ಮತ್ತು ಅಭಿವ್ಯಕ್ತಿಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ಅವುಗಳನ್ನು ಜಾಗತಿಕ ಶಾಂತಿಗೆ ಅಗತ್ಯವೆಂದರು. ಹೆಚ್ಚುತ್ತಿರುವ ಯಹೂದಿ ವಿರೋಧಿ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು ಗಾಜಾ ಯುದ್ಧವನ್ನು ಖಂಡಿಸಿದ್ದರು. ಜೊತೆಗೆ ಕದನ ವಿರಾಮಕ್ಕೆ ಕರೆ ನೀಡಿದ್ದರು.
1936 ರಲ್ಲಿ ಅರ್ಜೆಂಟೀನಾದ ಬ್ಯೂನಸ್ ಐರಿಸ್ನಲ್ಲಿ ಜಾರ್ಜ್ ಮಾರಿಯೋ ಬರ್ಗೋಗ್ಲಿಯೊ ಆಗಿ ಜನಿಸಿದ ಪೋಪ್ ಫ್ರಾನ್ಸಿಸ್, 2013 ರಲ್ಲಿ ಮೊದಲ ಜೆಸ್ಯೂಟ್ ಪೋಪ್ ಮತ್ತು 1,200 ವರ್ಷಗಳಲ್ಲಿ ಪೋಪ್ ಪದವಿಯನ್ನು ಹೊಂದಿದ ಮೊದಲ ಯುರೋಪಿಯನ್ ಅಲ್ಲದ ವ್ಯಕ್ತಿಯಾಗಿ ಇತಿಹಾಸ ಸೃಷ್ಟಿಸಿದರು. ಅವರ ನಾಯಕತ್ವವು ಎಲ್ಲರ ಗಮನವನ್ನು ಸೆಳೆಯಿತು.
ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆಯ ವ್ಯವಸ್ಥೆಗಳು ಹಾಗೂ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.