ನ್ಯೂಯಾರ್ಕ್, ಏ.11 (DaijiworldNews/AA): ಹೆಲಿಕಾಪ್ಟರ್ ಪತನಗೊಂಡು ನದಿಗೆ ಬಿದ್ದ ಪರಿಣಾಮ ಪೈಲಟ್ ಸೇರಿದಂತೆ ಐವರು ಮೃತಪಟ್ಟ ದಾರುಣ ಘಟನೆ ನ್ಯೂಯಾರ್ಕ್ನಲ್ಲಿ ಸಂಭವಿಸಿದೆ.

ಸಾವನ್ನಪ್ಪಿದರಲ್ಲಿ ನಾಲ್ವರು ಸ್ಪ್ಯಾನಿಷ್ ಮೂಲದ ಒಂದೇ ಕುಟುಂಬದವರಾಗಿದ್ದು, ಪ್ರವಾಸಕ್ಕಾಗಿ ನ್ಯೂಯಾರ್ಕ್ಗೆ ಬಂದಿದ್ದರು. ಮೃತಪಟ್ಟವರ ಪೈಕಿ ಮೂವರು ಮಕ್ಕಳು ಸೇರಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹೆಲಿಕಾಪ್ಟರ್ ಪತನದ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಬೆಲ್ 206 ಹೆಲಿಕಾಪ್ಟರ್ನ ಪತನಗೊಂಡ ಭಾಗಗಳು ಹಡ್ಸನ್ ನದಿಗೆ ಬೀಳುವುದನ್ನು ನೋಡಬಹುದಾಗಿದೆ. ಅಲ್ಲದೇ ಹೆಲಿಕಾಪ್ಟರ್ನ ರೋಟರ್ ಬ್ಲೇಡ್ ತುಂಡಾಗಿ ನದಿಗೆ ಮೊದಲು ಬಿದ್ದಿದೆ. ಬಳಿಕ ಪಕ್ಕದಲ್ಲಿ ಹೆಲಿಕಾಪ್ಟರ್ ನದಿಗೆ ಅಪ್ಪಳಿಸಿದೆ.
ಹೆಲಿಕಾಪ್ಟರ್ ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಸ್ಕೈಪೋರ್ಟ್ನಿಂದ ಹೊರಟು, ಹಾರಿ ಮ್ಯಾನ್ಹ್ಯಾಟನ್ ತೀರದ ಜಾರ್ಜ್ ವಾಷಿಂಗ್ಟನ್ ಸೇತುವೆ ಬಳಿ ಬಂದು ತಲುಪಿತ್ತು. ನಂತರ ಅದು ಡೌನ್ಟೌನ್ ಮ್ಯಾನ್ಹ್ಯಾಟನ್ ಹೆಲಿಪೋರ್ಟ್ ಕಡೆಗೆ ಹಿಂತಿರುಗುವಾಗ ನಿಯಂತ್ರಣ ಕಳೆದುಕೊಂಡು ನದಿಗೆ ಬಿದ್ದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೆಲಿಕಾಪ್ಟರ್ನ ಮುಖ್ಯ ರೋಟರ್ಗಳು ಬಾಲ ಬೂಮ್ಗೆ ಬಡಿದು ತುಂಡಾಗಿರುವ ಸಾಧ್ಯತೆ ಇದೆ. ಇನ್ನೂ ಯಾಂತ್ರಿಕ ವೈಫಲ್ಯದಿಂದ ಅಪಘಾತ ಸಂಭವಿಸಿದ್ದು, ಪೈಲಟ್ಗೆ ವಿಮಾನವನ್ನು ಉಳಿಸಲು ಯಾವುದೇ ಅವಕಾಶವಿರಲಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.