ಮುಂಬೈ, ನ.13 (DaijiworldNews/AA): ರಾಮಾಯಣವನ್ನು ಪ್ರೇಕ್ಷಕರಿಗೆ ತಲುಪಿಸಲು ಇಷ್ಟೊಂದು ಬೃಹತ್ ಹೂಡಿಕೆಯ ಅಗತ್ಯವಿಲ್ಲ. ಇಂತಹ ಭಾರಿ ವೆಚ್ಚವನ್ನು 'ಹಣದ ಪೋಲು' ಎಂದು ಹಿರಿಯ ನಟ ಮುಖೇಶ್ ಖನ್ನಾ ತಿಳಿಸಿದ್ದಾರೆ.

ಬಹುನಿರೀಕ್ಷಿತ 'ರಾಮಾಯಣ' ಸಿನಿಮಾದ ಬರೋಬ್ಬರಿ 4,000 ಕೋಟಿ ರೂಪಾಯಿ ಬಜೆಟ್ ಕುರಿತು ಮಾತನಾಡಿರುವ ಅವರು, "ಪೌರಾಣಿಕ ಮತ್ತು ಧಾರ್ಮಿಕ ಗ್ರಂಥಗಳನ್ನು ಆಧರಿಸಿ ಸಿನಿಮಾ ಮಾಡುವ ನಿರ್ದೇಶಕರಿಗೆ ಹೆಚ್ಚಿನ ಜವಾಬ್ದಾರಿ ಇರಬೇಕು. ಕೋಟ್ಯಂತರ ಜನರ ಭಾವನೆ ಮತ್ತು ನಂಬಿಕೆಗೆ ಸಂಬಂಧಿಸಿದ ಕಥೆಗಳಲ್ಲಿ ಅನಗತ್ಯವಾಗಿ ಸೃಜನಾತ್ಮಕ ಸ್ವಾತಂತ್ರ್ಯ ತೆಗೆದುಕೊಳ್ಳಬಾರದು" ಎಂದಿದ್ದಾರೆ.
"ಸಿನಿಮಾದ ಆರ್ಥಿಕ ಯಶಸ್ಸಿಗಿಂತ ಮೂಲ ಕಥೆಗೆ ಎಷ್ಟರಮಟ್ಟಿಗೆ ನ್ಯಾಯ ಒದಗಿಸಲಾಗಿದೆ ಎಂಬುದು ಮುಖ್ಯ. ನೀವು ಸಾವಿರ ಕೋಟಿ ಗಳಿಸಿದ್ದೀರಾ ಎಂಬುದು ನನಗೆ ಮುಖ್ಯವಲ್ಲ. ಆದರೆ, ಕಥೆಯಲ್ಲಿ ಸಾವಿರ ರೂಪಾಯಿಯಷ್ಟು ಸತ್ಯವನ್ನು ಮರೆಮಾಚಿದ್ದೀರಾ ಅಥವಾ ಸಾವಿರ ರೂಪಾಯಿಯಷ್ಟು ಸುಳ್ಳನ್ನು ಸೇರಿಸಿದ್ದೀರಾ ಎಂಬುದು ಮುಖ್ಯವಾಗುತ್ತದೆ. ಏಕೆಂದರೆ ಇದು ಸಾಮಾನ್ಯ ಕಥೆಯಲ್ಲ, ರಾಮಾಯಣದ ಕಥೆ. ನಮ್ಮ ಸಂಸ್ಕೃತಿಯಲ್ಲಿ ರಾಮಾಯಣ ಮತ್ತು ಮಹಾಭಾರತ ಎಂಬ ಎರಡು ಮಹಾನ್ ಗ್ರಂಥಗಳಿವೆ. ಅವುಗಳನ್ನು ಮುಟ್ಟುವಾಗ ಹೆಗಲ ಮೇಲೆ ದೊಡ್ಡ ಜವಾಬ್ದಾರಿ ಇರುತ್ತದೆ. ಅವುಗಳನ್ನು ತಿರುಚಲು ಸಾಧ್ಯವಿಲ್ಲ" ಎಂದು ಹೇಳಿದರು.
"ಬಾಹುಬಲಿ ಕೂಡ ಒಂದು ಸಿನಿಮಾ ಮತ್ತು ಅದು ತುಂಬಾ ಚೆನ್ನಾಗಿತ್ತು. ಅದಕ್ಕೆ ನೀವು ಸಾವಿರ ಕೋಟಿಯಲ್ಲ, 50,000 ಕೋಟಿ ರೂಪಾಯಿ ಬೇಕಾದರೂ ಖರ್ಚು ಮಾಡಬಹುದು. ಏನೂ ವ್ಯತ್ಯಾಸವಾಗುವುದಿಲ್ಲ. ಏಕೆಂದರೆ ಅದು ಕಾಲ್ಪನಿಕ ಕಥೆ. ಅಲ್ಲಿ ನಿಮಗೆ ಸೃಜನಾತ್ಮಕ ಸ್ವಾತಂತ್ರ್ಯವಿರುತ್ತದೆ. ಆದರೆ ರಾಮಾಯಣದ ವಿಚಾರದಲ್ಲಿ ಹಾಗೆ ಮಾಡಲು ಸಾಧ್ಯವಿಲ್ಲ" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಥೆ ಗಟ್ಟಿಯಾಗಿದ್ದರೆ ಕಡಿಮೆ ಬಜೆಟ್ನಲ್ಲೂ ಉತ್ತಮ ಸಿನಿಮಾ ಮಾಡಬಹುದು. ರಾಮಾಯಣಕ್ಕೆ 4,000 ಕೋಟಿ ಖರ್ಚು ಮಾಡಲೇಬೇಕು ಎಂದೇನಿಲ್ಲ. ಹನುಮಾನ್ ಅಂಶ್ ಚಿತ್ರ ಕೇವಲ 2 ಕೋಟಿ ರೂಪಾಯಿ ಬಜೆಟ್ನಲ್ಲಿ ಯಶಸ್ವಿಯಾಗಿತು. ಏಕೆಂದರೆ ಅಲ್ಲಿ ಕಥೆ ಮುಖ್ಯವಾಗಿತ್ತು. ಇಂದಿನ ಪ್ರೇಕ್ಷಕರಿಗೆ ಅರ್ಥಮಾಡಿಸಲು 4,000 ಕೋಟಿ ಖರ್ಚು ಮಾಡುವಷ್ಟು ರಾಮಾಯಣದ ಕಥೆ ನೀರಸವಾಗಿಲ್ಲ. ಒಂದು ವೇಳೆ ಆ 4,000 ಕೋಟಿ ರೂಪಾಯಿ ನಿಮ್ಮ ಕಥೆಯನ್ನೇ ಮರೆಮಾಚುವಂತಿದ್ದರೆ, ನಾನು ಅದನ್ನು ಕಂಪನಿಯ ಹಣ ಪೋಲು ಎಂದೇ ಕರೆಯುತ್ತೇನೆ" ಎಂದು ವಾಗ್ದಾಳಿ ನಡೆಸಿದ್ದಾರೆ.