ಬೆಂಗಳೂರು, ನ.12 (DaijiworldNews/AK): ನಗರದ ಜಿಗಣಿ ಬಳಿಯ ಪ್ರಶಾಂತಿ ಕುಟೀರದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿ ಮಾತನಾಡಿದ ಅವರು, ಯೋಗ ಕ್ಷೇತ್ರಕ್ಕೆ ಕರ್ನಾಟಕದವರ ಕೊಡುಗೆ ಅಪಾರ ಎಂದು ಬಣ್ಣಿಸಿರುವ ಅವರು, ವರನಟ ಡಾ. ರಾಜ್ಕುಮಾರ್ ಅವರನ್ನು ವಿಶೇಷವಾಗಿ ಸ್ಮರಿಸಿದ್ದಾರೆ.

ಯೋಗದ ಮಹತ್ವದ ಕುರಿತು ಮಾತನಾಡುತ್ತಾ ಪ್ರಧಾನಿ ಮೋದಿ ಅವರು ಡಾ. ರಾಜ್ಕುಮಾರ್ ಅವರ ಶಿಸ್ತಿನ ಜೀವನಶೈಲಿಯನ್ನು ಉಲ್ಲೇಖಿಸಿದ್ದಾರೆ. ‘ಯೋಗಕ್ಕೆ ಕರ್ನಾಟಕದವರ ಕೊಡುಗೆ ದೊಡ್ಡದಿದೆ. ವರ ನಟ ಡಾ. ರಾಜ್ಕುಮಾರ್ ಸಹ ಯೋಗಾಭ್ಯಾಸ ಮಾಡುತ್ತಿದ್ದರು’ ಎಂದು ಮೋದಿ ಶ್ಲಾಘಿಸಿದರು.
ಅಣ್ಣಾವ್ರು ತೆರೆಯ ಮೇಲೆ ಮಾತ್ರವಲ್ಲದೆ ವೈಯಕ್ತಿಕ ಬದುಕಿನಲ್ಲೂ ಅತ್ಯಂತ ಆರೋಗ್ಯಕರ ಜೀವನ ಶೈಲಿ ರೂಢಿಸಿಕೊಂಡಿದ್ದರು. ನಿತ್ಯದ ಬ್ಯುಸಿ ಶೂಟಿಂಗ್ ನಡುವೆಯೂ ಅವರು ತಪ್ಪದೇ ಯೋಗ ಮತ್ತು ಪ್ರಾಣಾಯಾಮ ಮಾಡುತ್ತಿದ್ದರು. ಯೋಗದ ಮೇಲಿನ ಅವರ ನಿರಂತರ ಒಲವು ಹಾಗೂ ಸಾಧನೆ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ.
ಡಾ. ರಾಜ್ಕುಮಾರ್ ಅವರು ಕೇವಲ ವ್ಯಾಯಾಮದ ದೃಷ್ಟಿಯಿಂದಷ್ಟೇ ಅಲ್ಲದೆ, ಮಾನಸಿಕ ನೆಮ್ಮದಿಗಾಗಿ ಯೋಗವನ್ನು ಅವಲಂಬಿಸಿದ್ದರು. ಕಠಿಣ ಆಸನಗಳು ಮತ್ತು ಉಸಿರಾಟದ ನಿಯಂತ್ರಣದ ಮೂಲಕ ತಮ್ಮ ದೇಹ ಮತ್ತು ಮನಸ್ಸನ್ನು ಸಮತೋಲನದಲ್ಲಿಟ್ಟುಕೊಳ್ಳುತ್ತಿದ್ದರು. ಚಿತ್ರರಂಗದ ಉತ್ತುಂಗದಲ್ಲಿದ್ದಾಗಲೂ ಅವರು ತಮ್ಮ ಆರೋಗ್ಯದ ಕಡೆಗೆ ವಿಶೇಷ ಕಾಳಜಿ ವಹಿಸಲು ಯೋಗವೇ ಪ್ರಮುಖ ಕಾರಣವಾಗಿತ್ತು.
ಪ್ರಶಾಂತಿ ಕುಟೀರದ ಸುವರ್ಣ ಮಹೋತ್ಸವದ ಈ ಐತಿಹಾಸಿಕ ವೇದಿಕೆಯಲ್ಲಿ ಡಾ. ರಾಜ್ಕುಮಾರ್ ಅವರ ಯೋಗ ಸಾಧನೆಯನ್ನು ಸ್ಮರಿಸಿರುವುದು ಕನ್ನಡಿಗರಲ್ಲಿ ಹೆಮ್ಮೆ ತಂದಿದೆ.