ಚೆನ್ನೈ, ನ.11 (DaijiworldNews/AK):ತಮಿಳು ಮತ್ತು ತೆಲುಗು ಚಿತ್ರರಂಗದ ಖ್ಯಾತ ನಟಿ ಪ್ರಿಯಾ ಭವಾನಿ ಶಂಕರ್ ಅವರು ತಮ್ಮ ದೀರ್ಘಕಾಲದ ಪ್ರಿಯಕರ ರಾಜ್ವೇಲ್ ರಾಜ್ ಅವರೊಂದಿಗೆ ಬುಧವಾರ (ನವೆಂಬರ್ 11) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಆಪ್ತರ ಸಮ್ಮುಖದಲ್ಲಿ ಅತ್ಯಂತ ಸರಳ ಹಾಗೂ ಸುಂದರ ಸಮಾರಂಭದಲ್ಲಿ ಈ ಜೋಡಿ ಶುಭ ಮುಹೂರ್ತದಲ್ಲಿ ಸಪ್ತಪದಿ ತುಳಿದಿದೆ. ಬಿಳಿ ಬಣ್ಣದ ಕುರ್ತಾ ಧರಿಸಿದ್ದ ರಾಜ್ವೇಲ್ ರಾಜ್ ಅವರನ್ನು ಕುಟುಂಬದ ಮಹಿಳೆಯರು ಹೂಗುಚ್ಛಗಳೊಂದಿಗೆ ಮಂಟಪಕ್ಕೆ ಕರೆತಂದರು. ಮತ್ತೊಂದೆಡೆ, ಸಾಂಪ್ರದಾಯಿಕ ಕೆಂಪು ಮತ್ತು ಹಸಿರು-ಚಿನ್ನದ ಬಣ್ಣದ ರೇಷ್ಮೆ ಸೀರೆಯಲ್ಲಿ ಕಂಗೊಳಿಸುತ್ತಿದ್ದ ಪ್ರಿಯಾ ಭವಾನಿ ಶಂಕರ್ ಅವರನ್ನು ಹೂವಿನ ಛತ್ರಿಯ ಅಡಿಯಲ್ಲಿ ಮಂಟಪಕ್ಕೆ ಕರೆತರಲಾಯಿತು.
ರಾಜ್ವೇಲ್ ಅವರು ಪ್ರಿಯಾ ಕೊರಳಿಗೆ ತಾಳಿ ಕಟ್ಟುವ ಮೂಲಕ ಅಧಿಕೃತವಾಗಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು.
ಕಾಲೇಜು ದಿನಗಳಿಂದಲೂ ಪರಸ್ಪರ ಪರಿಚಿತರಾಗಿದ್ದ ಪ್ರಿಯಾ ಮತ್ತು ರಾಜ್ವೇಲ್, ಕಳೆದ 10ಕ್ಕೂ ಹೆಚ್ಚು ವರ್ಷಗಳಿಂದ ಪ್ರೀತಿಸುತ್ತಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ತಮ್ಮ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದರು.
ಪ್ರಿಯಾ ಭವಾನಿ ಶಂಕರ್ ಅವರು ತಮ್ಮ ವೃತ್ತಿಜೀವನವನ್ನು ತಮಿಳಿನ ಸುದ್ದಿ ವಾಹಿನಿಯಲ್ಲಿ ಸುದ್ದಿ ನಿರೂಪಕಿಯಾಗಿ ಪ್ರಾರಂಭಿಸಿದರು. 2014ರಲ್ಲಿ ‘ಕಲ್ಯಾಣಂ ಮುದಲ್ ಕಾದಲ್ ವರೈ’ ಧಾರಾವಾಹಿ ಮೂಲಕ ನಟನಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಅವರು, ‘ಜೋಡಿ ನಂ. 1’ ಮತ್ತು ‘ಸೂಪರ್ ಸಿಂಗರ್’ ನಂತಹ ಜನಪ್ರಿಯ ರಿಯಾಲಿಟಿ ಶೋಗಳನ್ನು ನಿರೂಪಣೆ ಮಾಡಿದ್ದರು.