ಹೈದರಾಬಾದ್, ನ.10 (DaijiworldNews/TA): ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ಟಾಲಿವುಡ್ ನಟ ಪವನ್ ಕಲ್ಯಾಣ್ ಅವರ ವೈಯಕ್ತಿಕ ಜೀವನದ ಕುರಿತು ಮಹತ್ವದ ಸುದ್ದಿ ಹರಿದಾಡುತ್ತಿದೆ. ಪವನ್ ಕಲ್ಯಾಣ್ ಮತ್ತು ಅವರ ಪತ್ನಿ ಅನ್ನಾ ಕೊನಿಡೆಲಾ ಅವರು 13 ವರ್ಷಗಳ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿ, ಪರಸ್ಪರ ಒಪ್ಪಿಗೆಯಿಂದ ಬೇರೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಜಂಟಿ ಹೇಳಿಕೆ ಬಿಡುಗಡೆ ಮಾಡಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಜನಸೇನೆಯ ಅಧಿಕೃತ ವಾಟ್ಸ್ಆ್ಯಪ್ ಮಾಧ್ಯಮ ಗುಂಪಿನ ಮೂಲಕ ಈ ಹೇಳಿಕೆ ಬಿಡುಗಡೆ ಮಾಡಲಾಗಿದೆ ಎಂದು ಹೇಳಲಾಗಿದ್ದು, ತಮ್ಮ ನಿರ್ಧಾರಕ್ಕೆ ಪರಸ್ಪರ ಗೌರವ ಮತ್ತು ತಿಳಿವಳಿಕೆಯೇ ಕಾರಣ ಎಂದು ದಂಪತಿ ತಿಳಿಸಿದ್ದಾರೆ ಎನ್ನಲಾಗಿದೆ.

ಜಂಟಿ ಹೇಳಿಕೆಯಲ್ಲಿ, 'ನಮ್ಮ ಜೀವನದ ಮಹತ್ವದ ಭಾಗವನ್ನು ಒಟ್ಟಿಗೆ ಕಳೆದ ಬಳಿಕ ಪರಸ್ಪರ ತಿಳಿವಳಿಕೆ ಮತ್ತು ಗೌರವದೊಂದಿಗೆ ಬೇರೆಯಾಗಲು ನಿರ್ಧರಿಸಿದ್ದೇವೆ. ವೈವಾಹಿಕ ಜೀವನ ಅಂತ್ಯಗೊಂಡರೂ ಉತ್ತಮ ಸ್ನೇಹಿತರಾಗಿ ಹಾಗೂ ಮಕ್ಕಳ ಜವಾಬ್ದಾರಿಯುತ ಪೋಷಕರಾಗಿ ಮುಂದುವರಿಯುತ್ತೇವೆ. ಮಕ್ಕಳ ಸಂತೋಷ ಮತ್ತು ಯೋಗಕ್ಷೇಮವೇ ನಮ್ಮಿಬ್ಬರ ಪ್ರಮುಖ ಆದ್ಯತೆಯಾಗಿರಲಿದೆ' ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ವೈಯಕ್ತಿಕ ಜೀವನದಲ್ಲಿ ನಡೆಯುತ್ತಿರುವ ಬದಲಾವಣೆಯ ಸಂದರ್ಭದಲ್ಲಿ ತಮ್ಮ ಗೌಪ್ಯತೆಯನ್ನು ಗೌರವಿಸುವಂತೆ ಅಭಿಮಾನಿಗಳು ಮತ್ತು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ರಷ್ಯಾ ಮೂಲದ ಅನ್ನಾ ಅವರನ್ನು ಪವನ್ ಕಲ್ಯಾಣ್ 2013ರ ಸೆಪ್ಟೆಂಬರ್ನಲ್ಲಿ ವಿವಾಹವಾಗಿದ್ದರು. ಈ ದಂಪತಿಗೆ ಒಬ್ಬ ಪುತ್ರ ಮತ್ತು ಒಬ್ಬ ಪುತ್ರಿ ಇದ್ದಾರೆ. ಪವನ್ ಕಲ್ಯಾಣ್ ಅಭಿನಯದ 'ತೀನ್ ಮಾರ್' ಚಿತ್ರದಲ್ಲೂ ಅನ್ನಾ ನಟಿಸಿದ್ದರು. ಇದಕ್ಕೂ ಮೊದಲು ಪವನ್ ಕಲ್ಯಾಣ್ 1997ರಲ್ಲಿ ನಂದಿನಿ ಅವರನ್ನು ವಿವಾಹವಾಗಿದ್ದರು. 1999ರಲ್ಲಿ ಇಬ್ಬರೂ ಪ್ರತ್ಯೇಕಗೊಂಡಿದ್ದು, 2008ರಲ್ಲಿ ವಿಚ್ಛೇದನ ಪಡೆದಿದ್ದರು. ಬಳಿಕ 2009ರಲ್ಲಿ ನಟಿ ರೇಣು ದೇಸಾಯಿ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೂ ಒಬ್ಬ ಪುತ್ರ ಮತ್ತು ಒಬ್ಬ ಪುತ್ರಿ ಇದ್ದಾರೆ. 2012ರಲ್ಲಿ ಇಬ್ಬರೂ ಪ್ರತ್ಯೇಕಗೊಂಡಿದ್ದರು. ಇದೀಗ ಅನ್ನಾ ಅವರೊಂದಿಗಿನ ದಾಂಪತ್ಯದ ಕುರಿತ ಸುದ್ದಿಯು ಟಾಲಿವುಡ್ ಹಾಗೂ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.