ದೆಹಲಿ, ನ.07 (DaijiworldNews/AA): ಬಾಲಿವುಡ್ನ ಹಿರಿಯ ನಟ ಅಮಿತಾಭ್ ಬಚ್ಚನ್ ಅವರ ಹೆಸರು, ಧ್ವನಿ, ವ್ಯಕ್ತಿತ್ವವನ್ನು ಅನುಮತಿ ಇಲ್ಲದೆ ವಾಣಿಜ್ಯ ಉದ್ದೇಶಕ್ಕಾಗಿ ಬಳಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಆದೇಶ ಹೊರಡಿಸಿದೆ.

2022ರಲ್ಲಿ ಅಮಿತಾಭ್ ಬಚ್ಚನ್ ಅವರು ಸಲ್ಲಿಸಿದ್ದ ವಾಣಿಜ್ಯ ಅರ್ಜಿಗೆ ಸಂಬಂಧಿಸಿದಂತೆ ಈ ತೀರ್ಪು ನೀಡಲಾಗಿದೆ. ಮೊಬೈಲ್ ಆ್ಯಪ್ಗಳು, ವೆಬ್ಸೈಟ್ಗಳು, ಪೋಸ್ಟರ್ಗಳು ಹಾಗೂ ರಸಪ್ರಶ್ನೆ ಪುಸ್ತಕಗಳಲ್ಲಿ ಅವರ ಗುರುತನ್ನು ಅಕ್ರಮವಾಗಿ ಬಳಸಲಾಗುತ್ತಿತ್ತು. ಇದನ್ನು ತಡೆಯಲು ಕೋರ್ಟ್ ಈ ಹಿಂದೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಈಗ ಶಾಶ್ವತ ಆದೇಶವನ್ನಾಗಿ ನ್ಯಾಯಮೂರ್ತಿ ಪುರುಷೇಂದ್ರ ಕುಮಾರ್ ಕೌರವ್ ಅವರು ಬದಲಾಯಿಸಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ಕು ಪ್ರಮುಖ ಸಂಸ್ಥೆಗಳು ರಾಜಿ ಮಾಡಿಕೊಳ್ಳಲು ಮುಂದಾಗಿವೆ. ನಕಲಿ ವೀಡಿಯೊ ಕಾಲ್ ಆ್ಯಪ್, ರಸಪ್ರಶ್ನೆ ಪುಸ್ತಕ, ಪೋಸ್ಟರ್ ಮಾರಾಟಗಾರರು ಮತ್ತು ವೆಬ್ಸೈಟ್ ಮಾಲೀಕರು ತಪ್ಪೊಪ್ಪಿಕೊಂಡಿದ್ದಾರೆ. ಅವರು ನಟನ ವ್ಯಕ್ತಿತ್ವವನ್ನು ಮುಂದಿನ ದಿನಗಳಲ್ಲಿ ಬಳಸುವುದಿಲ್ಲ ಎಂದು ಕೋರ್ಟ್ ಗೆ ಭರವಸೆ ನೀಡಿದ್ದಾರೆ. ಹೀಗಾಗಿ ನ್ಯಾಯಾಲಯವು ಅವರಿಗೆ ದಂಡದಿಂದ ವಿನಾಯಿತಿ ನೀಡಿದೆ.
ಆದರೆ ಕೋರ್ಟ್ ಗೆ ಹಾಜರಾಗದ ಇತರ ನಾಲ್ಕು ಆರೋಪಿಗಳ ವಿರುದ್ಧ ನ್ಯಾಯಾಲಯ ಕಠಿಣ ಕ್ರಮ ಕೈಗೊಂಡಿದೆ. ವಿಚಾರಣೆಗೆ ಹಾಜರಾಗದ ಕಾರಣ ಅವರ ವಿರುದ್ಧ ನೇರ ಆದೇಶ ಹೊರಡಿಸಲಾಗಿದೆ. ಅಮಿತಾಭ್ ಅವರ ಹೆಸರನ್ನು ಅಕ್ರಮವಾಗಿ ಬಳಸಿರುವುದು ಸ್ಪಷ್ಟವಾಗಿದೆ. ಹೀಗಾಗಿ ಈ ವಿಚಾರದಲ್ಲಿ ಹೆಚ್ಚಿನ ವಿಚಾರಣೆಯ ಅಗತ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.