ದೆಹಲಿ, ನ.06 (DaijiworldNews/AA): ಹಿಂದಿ ಸಿನಿಮಾ 'ದೂಸ್ರಾ' ಬಿಡುಗಡೆಗೆ ತಡೆ ನೀಡಬೇಕೆಂದು ಮನವಿ ಮಾಡಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.

'ದೂಸ್ರಾ' ಸಿನಿಮಾದ ಪೋಸ್ಟರ್ನಲ್ಲಿ2002ರ ನ್ಯಾಟ್ವೆಸ್ಟ್ ಸರಣಿಯ ಕೊನೆಯ ಪಂದ್ಯದ ಗೆಲುವಿನ ಬಳಿಕ ಸೌರವ್ ಗಂಗೂಲಿ ಶರ್ಟ್ ಬಿಚ್ಚಿ ಸಂಭ್ರಮಿಸಿದ್ದ ಐಕಾನಿಕ್ ಚಿತ್ರವನ್ನು ಬಳಸಲಾಗಿದೆ. ಸಿನಿಮಾದ ಟ್ರೈಲರ್ನಲ್ಲಿಯೂ ಸಹ ಹಲವು ದೃಶ್ಯಗಳನ್ನು ಬಳಸಲಾಗಿದೆ. ಆದರೆ ಚಿತ್ರತಂಡವು ಅನುಮತಿ ಇಲ್ಲದೆ ತಮ್ಮ ಚಿತ್ರ, ಹೆಸರು ಮತ್ತು ದೃಶ್ಯಗಳನ್ನು ಬಳಸಿದೆ. ತಮ್ಮ ವ್ಯಕ್ತಿತ್ವದ ಹಕ್ಕನ್ನು ಚಿತ್ರತಂಡ ಉಲ್ಲಂಘಿಸಿದೆ ಎಂದು ಆರೋಪಿಸಿ ಗಂಗೂಲಿ ದೂರು ದಾಖಲಿಸಿ, ಸಿನಿಮಾ ಬಿಡುಗಡೆಗೆ ತಡೆ ನೀಡುವಂತೆ ಮನವಿ ಮಾಡಿದ್ದರು.
ಆದರೆ ಚಿತ್ರತಂಡವು, ತಾವು ಬಿಸಿಸಿಐ ಹಾಗೂ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ನ ಅನುಮತಿಯನ್ನು ಪಡೆದುಕೊಂಡೇ ನ್ಯಾಟ್ವೆಸ್ಟ್ ಸರಣಿಯ ದೃಶ್ಯಗಳನ್ನು ಹಾಗೂ ಇತರೆ ಕ್ರಿಕೆಟ್ ಗೆ ಸಂಬಂಧಿಸಿದ ದೃಶ್ಯಗಳನ್ನು ಬಳಸಿರುವುದಾಗಿ ಸ್ಪಷ್ಟನೆ ನೀಡಿದೆ. ಅಲ್ಲದೆ, ತಾವು ಬಳಸಿರುವ ಕ್ರಿಕೆಟ್ ಪಂದ್ಯದ ದೃಶ್ಯಗಳು ಸೌರವ್ ಗಂಗೂಲಿ ಅವರ ವ್ಯಕ್ತಿತ್ವದ ಹಕ್ಕನ್ನು ಉಲ್ಲಂಘನೆ ಮಾಡುವುದಿಲ್ಲ ಎಂದು ಸಮರ್ಥಿಸಿಕೊಂಡಿತ್ತು.
ಅರ್ಜಿ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ಗಂಗೂಲಿ ಮನವಿಯಂತೆ ಸಿನಿಮಾದ ಬಿಡುಗಡೆಗೆಯನ್ನು ತಡೆಯಲು ನಿರಾಕರಿಸಿದೆ. ಆದರೆ ಆರೋಪದ ಗಂಭೀರತೆ ಅರಿಯಲು ಸಿನಿಮಾದ ವಿಶೇಷ ಶೋ ಅನ್ನು ಆಯೋಜಿಸುವಂತೆ ಆದೇಶಿಸಿತ್ತು. ಅಕ್ಟೋಬರ್ 29ರಂದು ನಡೆದ ವಿಚಾರಣೆಯಲ್ಲಿ ತಮಗೆ ಆಕ್ಷೇಪವಿರುವ ದೃಶ್ಯಗಳ ಮಾಹಿತಿ ನೀಡುವಂತೆ ಸೌರವ್ ಗಂಗೂಲಿ ಅವರಿಗೆ ಕೋರ್ಟ್ ನಿರ್ದೇಶಿಸಿತ್ತು.
ಇದೀಗ ನೀಡಿರುವ ಆದೇಶದಂತೆ ನ್ಯಾಯಾಲಯವು ಸಿನಿಮಾದ ಆರಂಭದಲ್ಲಿ ಡಿಸ್ಕೇಮರ್ ಸಂದೇಶವನ್ನು ಸೇರಿಸಬೇಕು. ಜೊತೆಗೆ ಎರಡು ಕೋಟಿ ರೂಪಾಯಿಗಳ ಗ್ಯಾರೆಂಟಿಯನ್ನು ನೀಡಬೇಕು ಎಂದು ಆದೇಶಿಸಿದೆ.