ನವದೆಹಲಿ, ನ.03 (DaijiworldNews/AA): ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಮುಂಬೈನ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಾಲಿವುಡ್ ನಟ ಇಮ್ರಾನ್ ಖಾನ್, ಭವಿಷ್ಯದಲ್ಲಿ ಯಾವುದೇ ಪ್ರತಿಭಟನೆಯಲ್ಲಿ ಭಾಗವಹಿಸುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಎದುರು ಬೇಷರತ್ ಕ್ಷಮೆಯಾಚಿಸಿದ್ದಾರೆ. ಜೊತೆಗೆ ಭಾರತ ತೊರೆಯುವಂತೆ ಅವರಿಗೆ ನೀಡಲಾಗಿದ್ದ ನೋಟಿಸ್ಗೆ ಮುಂದಿನ ವಿಚಾರಣೆಯವರೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ನಟ ಇಮ್ರಾನ್ ಖಾನ್ ಅಮೆರಿಕದ ಪ್ರಜೆಯಾಗಿದ್ದು, ಸಾಗರೋತ್ತರ ಭಾರತೀಯ ಪೌರತ್ವ ಕಾರ್ಡ್ ಹೊಂದಿದ್ದಾರೆ. ಅಕ್ಟೋಬರ್ 10ರಂದು ಮುಂಬೈನ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ನಟ ಸೇರಿದಂತೆ ಸುಮಾರು 400 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದರ ಬೆನ್ನಲ್ಲೇ ವಲಸೆ ಕಾಯ್ದೆಯ ನಿಯಮಗಳಡಿ ನಟನಿಗೆ ಭಾರತ ತೊರೆಯುವಂತೆ ನೋಟಿಸ್ ನೀಡಲಾಗಿತ್ತು.
ನಟ ನ್ಯಾಯಾಲಯಕ್ಕೆ ಲಿಖಿತ ಭರವಸೆ ಸಲ್ಲಿಸಿದ್ದು, "ಮುಂದೆ ಯಾವುದೇ ರೀತಿಯ ಪ್ರತಿಭಟನೆಯಲ್ಲಿ ಭಾಗವಹಿಸುವುದಿಲ್ಲ. ಅಮೆರಿಕದಲ್ಲಿ ಕಳೆದ ಎರಡು ವರ್ಷ ಕಳೆದಿದ್ದನ್ನು ಹೊರತುಪಡಿಸಿದರೆ, ನಾನು ನನ್ನ ಜೀವನದ ಬಹುತೇಕ ಸಮಯವನ್ನು ಭಾರತದಲ್ಲೇ ಕಳೆದಿದ್ದೇನೆ. ಭಾರತವೇ ನನ್ನ ಮನೆ. ನನ್ನ ಮಗು ಇಲ್ಲಿಯೇ ಇದೆ. ನನ್ನ ವೃತ್ತಿ ಮತ್ತು ವೈಯಕ್ತಿಕ ಬದುಕು ಇಲ್ಲಿಯೇ ನೆಲೆಗೊಂಡಿದೆ. ನನ್ನ ಕೆಲಸ, ಕುಟುಂಬ ಮತ್ತು ಬೇರುಗಳೆಲ್ಲವೂ ಭಾರತದಲ್ಲಿವೆ" ಎಂದು ತಿಳಿಸಿದ್ದಾರೆ.
"ಇಷ್ಟು ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿದ್ದೀರಿ. ಆದರೆ ಈ ಹಿಂದೆ ಎಂದಿಗೂ ಯಾವುದೇ ಪ್ರತಿಭಟನೆಯಲ್ಲಿ ಭಾಗವಹಿಸಿರಲಿಲ್ಲ. ಇಷ್ಟು ವರ್ಷಗಳ ನಂತರ ಈಗ ಇದ್ದಕ್ಕಿದ್ದಂತೆ ಪ್ರತಿಭಟನೆಯಲ್ಲಿ ಭಾಗವಹಿಸಲು ನಿರ್ಧರಿಸಿದ್ದೇಕೆ? ಒಸಿಐ ಕಾರ್ಡ್ ಹೊಂದಿರುವವರು ಭಾರತದಲ್ಲಿ ವಾಸಿಸುತ್ತಿರುವಾಗ ಸರ್ಕಾರವನ್ನು ಟೀಕಿಸುವುದು ಅಥವಾ ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸುವುದಕ್ಕೆ ಅವಕಾಶವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಇಂತಹ ವರ್ತನೆಯನ್ನು ಸಹಿಸುವುದಿಲ್ಲ.ನೀವು ಅಮೆರಿಕಕ್ಕೆ ಹೋಗಿ ಅಲ್ಲಿ ಪ್ರತಿಭಟನೆ ಮಾಡಿ. ಅಷ್ಟೇ ಅಲ್ಲ, ಅಲ್ಲಿಗೆ ಹೋಗಿ ನಿಮ್ಮ ಮತವನ್ನೂ ಚಲಾಯಿಸಬಹುದು. ಆದರೆ ಇಲ್ಲಿ ನೀವು ಪ್ರತಿಭಟನೆ ಮಾಡುವುದನ್ನು ಸಹಿಸುವುದಿಲ್ಲ" ಎಂದು ಮುಖ್ಯ ನ್ಯಾಯಮೂರ್ತಿ ಮಹೇಶ್ ಚಂದ್ರ ತ್ರಿಪಾಠಿ ಅವರು ಎಚ್ಚರಿಕೆ ನೀಡಿದ್ದಾರೆ.