ಮುಂಬೈ, ಅ.24 (DaijiworldNews/AA): ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ನಡೆದ ಗುಂಡಿನ ದಾಳಿಯ ಬಳಿಕ ಸ್ಟಾರ್ ನಟರ ಮನೆಗಳ ಬಳಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಆದರೆ ಪ್ರತಿಯೊಬ್ಬ ನಟರಿಗೂ ಪ್ರತ್ಯೇಕವಾಗಿ ಭದ್ರತೆ ನೀಡುವುದು ವ್ಯವಹಾರಿಕವಾಗಿ ಸಾಧ್ಯವಿಲ್ಲ ಎಂದು ಫೆಡರೇಷನ್ ಆಫ್ ವೆಸ್ಟರ್ನ್ ಇಂಡಿಯಾ ಸೈನ್ ಎಂಪ್ಲಾಯೀಸ್ ಮುಖ್ಯ ಸಲಹೆಗಾರ ಅಶೋಕ್ ಪಂಡಿತ್ ತಿಳಿಸಿದ್ದಾರೆ.

"ಘಟನೆ ನಡೆದ ಆರಂಭದಲ್ಲಿ ಇಡೀ ಚಿತ್ರರಂಗದಲ್ಲಿ ತೀವ್ರ ಭಯದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಪೊಲೀಸರು ಕೇವಲ ಎರಡು ದಿನಗಳಲ್ಲಿ ಆರೋಪಿಗಳನ್ನು ಬಂಧಿಸುವ ಮೂಲಕ ಮಹತ್ವದ ಕಾರ್ಯಾಚರಣೆ ನಡೆಸಿದ್ದಾರೆ. ಸರ್ಕಾರದ ಈ ದಿಢೀರ್ ಮತ್ತು ಕಠಿಣ ಕ್ರಮವು ಚಿತ್ರರಂಗದ ಕಲಾವಿದರಲ್ಲಿ ಧೈರ್ಯ ಹಾಗೂ ವಿಶ್ವಾಸವನ್ನು ಮೂಡಿಸಿದೆ. ಕಾನೂನಿನ ಮೇಲಿನ ಭಯವು ಇಂತಹ ದುಷ್ಕರ್ಮಿಗಳ ದುಷ್ಟ ಸಂಚನ್ನು ಮಟ್ಟಹಾಕುತ್ತದೆ" ಎಂದು ಹೇಳಿದರು.
"ನಟ ಟೈಗರ್ ಶ್ರಾಫ್ ಅವರ ತಂದೆ ಜಾಕಿ ಶ್ರಾಫ್ ಅವರನ್ನು ಭೇಟಿಯಾಗಿ ಮಾತನಾಡಿದ್ದೇನೆ. ದೇವರ ದಯೆಯಿಂದ ಎಲ್ಲವೂ ಸುರಕ್ಷಿತವಾಗಿದೆ ಎಂದು ಜಾಕಿ ಶ್ರಾಫ್ ಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರದ ತ್ವರಿತ ಸ್ಪಂದನೆಯು ತಮಗೆ ತುಂಬು ಆತ್ಮವಿಶ್ವಾಸ ನೀಡಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಘಟನೆಯ ನಂತರವೂ ಚಿತ್ರರಂಗದ ದೈನಂದಿನ ಕೆಲಸಗಳಿಗೆ ಯಾವುದೇ ರೀತಿಯ ಅಡ್ಡಿಯಾಗಿಲ್ಲ" ಎಂದರು.