ಬೆಂಗಳೂರು, ಅ.23 (DaijiworldNews/AA): ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ನಟ ಧನ್ವೀರ್ ಗೌಡ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಶೀತಲ ಸಮರ ನಡೆಯುತ್ತಿದೆ. ಇದೀಗ ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜ್ ಎಂಬುವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರೋಪದ ಮೇಲೆ ನಟನ ವಿರುದ್ಧ ದೂರು ದಾಖಲಾಗಿದೆ.

ನಟ ಧನ್ವೀರ್ ಗೌಡ ಅವರು ತಮಗೆ ಫೋನ್ ಕರೆ ಮಾಡಿ ಅತ್ಯಂತ ಕೆಟ್ಟ ಪದಗಳಿಂದ ನಿಂದಿಸಿ, ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜೊತೆಗೆ ನಿಂದಿಸಿರುವ ಆಡಿಯೋ ಸಂಭಾಷಣೆಯನ್ನು ಸಾಕ್ಷ್ಯಯಾಗಿ ನೀಡಿದ್ದಾರೆ.
ಕಳೆದ ಕೆಲ ದಿನಗಳಿಂದ ವಿಜಯಲಕ್ಷ್ಮಿ ಹಾಗೂ ಧನ್ವೀರ್ ಗೌಡ ನಡುವೆ ಸಾಮಾಜಿಕ ಮಾಧ್ಯಮಗಳಲ್ಲಿ ಶೀತಲ ಸಮರ ನಡೆಯುತ್ತಿತ್ತು. 'ಕೆಲವರು ದರ್ಶನ್ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸ್ವಹಿತಾಸಕ್ತಿ ಸಾಧಿಸುತ್ತಿದ್ದಾರೆ' ಎಂದು ವಿಜಯಲಕ್ಷ್ಮಿ ಪೋಸ್ಟ್ ಮಾಡಿದ್ದರು. ಇದಕ್ಕೆ ಪ್ರತಿಯಾಗಿ 'ಕೆಲವರು ಶಕುನಿಗಳಂತೆ ಇರುತ್ತಾರೆ. ಕೊನೆಯವರೆಗೂ ಆಟವಾಡಿ, ಅಂತಿಮವಾಗಿ ತಾವೇ ಸಂತ್ರಸ್ತರಂತೆ ನಟಿಸುತ್ತಾರೆ. ಅವರಿಗೆ ಹೆದರಿಸಿ ಅಭ್ಯಾಸ, ನಮಗೆ ಎದುರಿಸಿ ಅಭ್ಯಾಸ' ಎಂದು ಧನ್ವೀರ್ ಪೋಸ್ಟ್ ಹಂಚಿಕೊಂಡಿದ್ದರು. ಈ ಶೀತಲ ಸಮರ ತಾರಕಕ್ಕೇರಿದ ಬೆನ್ನಲ್ಲೇ ಮ್ಯಾನೇಜರ್ಗೆ ಕರೆ ಮಾಡಿ ಧನ್ವೀರ್ ನಿಂದಿಸಿರುವ ಆಡಿಯೋ ವಿವಾದಕ್ಕೆ ಕಾರಣವಾಗಿದೆ.