ಮುಂಬೈ,ಅ.19 (DaijiworldNews/AK): ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಮೇಲೆ ಅಕ್ಟೋಬರ್ 18ರಂದು ನಡೆದ ಗುಂಡಿನ ದಾಳಿಯ ಬೆನ್ನಲ್ಲೇ, ಹಿಂದಿ ಚಿತ್ರರಂಗದಲ್ಲಿ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರನ್ನು ವಶಕ್ಕೆ ಪಡೆಯಲಾಗಿದ್ದು, ಸೆಲೆಬ್ರಿಟಿಗಳ ಸುರಕ್ಷತೆಯನ್ನು ಕಡ್ಡಾಯವಾಗಿ ಮರುಪರಿಶೀಲಿಸುವುದಾಗಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಭರವಸೆ ನೀಡಿದ್ದರು. ಇದರ ಬೆನ್ನಲ್ಲೇ ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್ ಅತ್ಯಂತ ಬಿಗಿ ಭದ್ರತೆಯೊಂದಿಗೆ ಕಾಣಿಸಿಕೊಂಡಿದ್ದಾರೆ.
ಮಂಗಳವಾರ (ಅಕ್ಟೋಬರ್ 20) ಮುಂಜಾನೆ ಮುಂಬೈನ ಖಾಸಗಿ ವಿಮಾನ ನಿಲ್ದಾಣದಲ್ಲಿ ಸಲ್ಮಾನ್ ಖಾನ್ ಅವರು ಎಂದಿಗಿಂತಲೂ ಹೆಚ್ಚಿನ ಮತ್ತು ವಿಶೇಷ ಭದ್ರತಾ ಪಡೆಗಳ ರಕ್ಷಣೆಯೊಂದಿಗೆ ಕಾಣಸಿಕ್ಕಿದ್ದಾರೆ. ಅವರ ಜೊತೆ ಬಂದೂಕುಧಾರಿ ಭದ್ರತಾ ಸಿಬ್ಬಂದಿ ಬಿಗಿ ಭದ್ರತೆ ಒದಗಿಸಿದ್ದು, ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಕುಖ್ಯಾತ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನಿಂದ ಸಲ್ಮಾನ್ ಖಾನ್ ನಿರಂತರವಾಗಿ ಜೀವ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ. ಇತ್ತೀಚೆಗೆ ಟೈಗರ್ ಶ್ರಾಫ್ ಮೇಲಿನ ದಾಳಿಯ ನಂತರ ಬಿಡುಗಡೆಯಾದ ಒಂದು ಆಡಿಯೋ ಸಂದೇಶದಲ್ಲಿ ಸಲ್ಮಾನ್ ಖಾನ್ ಹೆಸರನ್ನು ನೇರವಾಗಿ ಉಲ್ಲೇಖಿಸಲಾಗಿದೆ. ಆ ಸಂದೇಶದಲ್ಲಿ, ‘ಇಂದಿನ ಟೈಗರ್ ಶ್ರಾಫ್ ಘಟನೆಗೆ ಅನಿಲ್ ಪಂಡಿತ್ ಮತ್ತು ಹರ್ಮನ್ ಸಂಧು ಹೊಣೆ. ನಾವು ಮೊದಲು ಎಚ್ಚರಿಕೆ ನೀಡಿದ್ದೆವು ಆದರೆ ಅವರು ಅರ್ಥಮಾಡಿಕೊಳ್ಳಲಿಲ್ಲ. ಮುಂಬೈ ಚಿತ್ರರಂಗದಲ್ಲಿ ಯಾರು ನಮ್ಮ ಮಾತನ್ನು ಕೇಳುವುದಿಲ್ಲವೋ ಅಥವಾ ಸಲ್ಮಾನ್ ಖಾನ್ ಜೊತೆ ಕೆಲಸ ಮಾಡುತ್ತಾರೋ, ಅವರೇ ಮುಂದಿನ ಗುರಿ’ ಎಂದು ಎಚ್ಚರಿಕೆ ನೀಡಲಾಗಿದೆ.