ಬೆಂಗಳೂರು, ಅ.09 (DaijiworldNews/AA): ಉಡುಪಿ ಮೂಲದ ಚೇತನ್ ಡಿ'ಸೋಜಾ ಅವರು 'ಜೈಲರ್ 2' ಚಿತ್ರದಲ್ಲಿ ಸಾಹಸ ನಿರ್ದೇಶನ ಮಾಡುವ ಮೂಲಕ ಎಲ್ಲರ ಗಮನ ತಮ್ಮತ್ತ ಸೆಳೆದಿದ್ದಾರೆ. ರಜನಿಕಾಂತ್ ಅಭಿನಯದ 'ಜೈಲರ್ 2' ಚಿತ್ರ ಅ. 15ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದ್ದು, ಈ ಸಿನಿಮಾದಲ್ಲಿನ ಸಾಹಸ ನಿರ್ದೇಶನದ ಸಂಪೂರ್ಣ ಜವಾಬ್ದಾರಿ ಚೇತನ್ ಡಿ'ಸೋಜಾ ವಹಿಸಿಕೊಂಡಿದ್ದಾರೆ.










ಚೇತನ್ ಅವರು 2007ರಲ್ಲಿ ಸಾಫ್ಟ್ವೇರ್ ಡೆವಲಪರ್ ಆಗಿ ಕೆಲಸ ಮಾಡಲು ಬೆಂಗಳೂರಿಗೆ ಆಗಮಿಸಿದರು. ಶಾಲಾ ದಿನಗಳಲ್ಲಿ ಚೇತನ್ ಕರಾಟೆ ಕಲಿತಿದ್ದರು. ಬೆಂಗಳೂರಿಗೆ ಕೆಲಸಕ್ಕೆ ಬಂದ ಬಳಿಕ ವಾರಾಂತ್ಯಗಳಲ್ಲಿ ಪಾರ್ಕರ್ ಮತ್ತು ಜಿಮ್ನಾಸ್ಟಿಕ್ಸ್ ಕಲಿಯುತ್ತಿದ್ದರು. ಮಾರ್ಷಲ್ ಆರ್ಟ್ಸ್ ಜೊತೆಗೆ ಇವುಗಳನ್ನು ಕ್ಯಾಮೆರಾ ಮುಂದೆ ಹೇಗೆ ಪರಿಣಾಮಕಾರಿಯಾಗಿ ಬಳಸಬಹುದು ಎಂಬುದನ್ನೂ ಕಲಿತು ವಿಡಿಯೊಗಳ ಚಿತ್ರೀಕರಣ ಮಾಡಲು ಪ್ರಾರಂಭಿಸಿದರು. ಈ ಮೂಲಕ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ಚೇತನ್ ಇಂದು ಚಿತ್ರರಂಗದಲ್ಲಿ ಸಾಹಸ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ.
ಚೇತನ್ ಅವರು ಎರಡು ಮಾರ್ಷಲ್ ಆರ್ಟ್ಸ್ ವಿಭಾಗಗಳಲ್ಲಿ ಬ್ಲ್ಯಾಕ್ ಬೆಲ್ಟ್ ಹೊಂದಿದ್ದಾರೆ. ಜೊತೆಗೆ ಅವರು ವಿವಿಧ ಆಯುಧಗಳನ್ನು ಬಳಸುವ ತರಬೇತಿಯನ್ನೂ ಪಡೆದಿದ್ದಾರೆ. ಮಾರ್ಷಲ್ ಆರ್ಟ್ಸ್ ಮತ್ತು ದೇಹದ ಚಲನೆಯ ಕಲೆಗಳಲ್ಲಿ ಚೇತನ್ ಅವರು 22 ವರ್ಷಗಳಿಗೂ ಹೆಚ್ಚಿನ ಅನುಭವ ಹೊಂದಿದ್ದಾರೆ.
ಚೇತನ್ ಅವರು ತಮ್ಮದೇ ಆದ CF Action Design ಸಂಸ್ಥೆಯನ್ನು ಆರಂಭಿಸಿದರು. ಜೊತೆಗೆ ಬೆಂಗಳೂರಿನ ಸಾಹಸ ತರಬೇತಿ ಕೇಂದ್ರವಾದ Chaos Faktoryಯ ಸಹ-ಸ್ಥಾಪಕರು ಕೂಡ ಆಗಿದ್ದಾರೆ.
ಚೇತನ್ ಅವರ ಶ್ರಮದ ಫಲವಾಗಿ ಮೂಡಿಬಂದ 'Wrong Move' ಕಿರುಚಿತ್ರ ಯೂಟ್ಯೂಬ್ ನಲ್ಲಿ ಸುಮಾರು 10 ಲಕ್ಷ ವೀಕ್ಷಣೆಗಳನ್ನು ಗಳಿಸಿತು. ಚೇತನ್ ತಮ್ಮ 12 ವರ್ಷಗಳ ಕಾರ್ಪೊರೇಟ್ ಬದುಕಿಗೆ ವಿದಾಯ ಹೇಳಿ ಇದೀಗ ಪೂರ್ಣಾವಧಿ ಸಾಹಸ ನಿರ್ದೇಶಕರಾಗಿ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಚೇತನ್ ಅವರು 'ಜೈಲರ್ 2' ಚಿತ್ರದ ಸಾಹಸ ನಿರ್ದೇಶನದ ಮೂಲಕ ಸಿನಿ ಅಭಿಮಾನಿಗಳ ಗಮನ ಸೆಳೆಯಲು ಸಜ್ಜಾಗಿದ್ದಾರೆ.
ಕರಾವಳಿ ಮೂಲದ ಚೇತನ್ ಡಿ'ಸೋಜಾ ಅವರು ಇಂದು ಚಿತ್ರರಂಗದಲ್ಲಿ ಸಾಹಸ ನಿರ್ದೇಶನ ಮೂಲಕ ಮಿಂಚುತ್ತಿದ್ದಾರೆ. ಚೇತನ್ ಅವರು ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಸುದೀಪ್, ಉಪೇಂದ್ರ, ಶ್ರೀಮುರಳಿ, ರಾಜ್ ಬಿ. ಶೆಟ್ಟಿ, ಫಹಾದ್ ಫಾಸಿಲ್ ಸೇರಿದಂತೆ ಹಲವು ನಟರ ಚಿತ್ರಗಳಲ್ಲಿ ಸಾಹಸ ನಿರ್ದೇಶನ ಮಾಡಿ ಮೆಚ್ಚುಗೆ ಗಳಿಸಿದ್ದಾರೆ.