ಮುಂಬೈ, ಅ.01 (DaijiworldNews/TA): ಬಾಲಿವುಡ್ನ ಹಿರಿಯ ನಟ ಅಮಿತಾಭ್ ಬಚ್ಚನ್ ಅವರು ವಯಸ್ಸಿನ ನಡುವೆಯೂ ಸಿನಿಮಾ, ಕಿರುತೆರೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಸದ್ಯ ಅವರು ‘ಕೌನ್ ಬನೇಗಾ ಕರೋಡ್ಪತಿ 18’ ಕಾರ್ಯಕ್ರಮದ ನಿರೂಪಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ನಡುವೆ KBC ಶೂಟಿಂಗ್ ವೇಳೆ ಅಮಿತಾಭ್ ಬಚ್ಚನ್ ಜಾರಿಬಿದ್ದು ಎಡ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದಾರೆ.

ಚಿತ್ರೀಕರಣದ ವೇಳೆ ಜಾರಿಬಿದ್ದ ಪರಿಣಾಮ ಮೊಣಕಾಲಿಗೆ ಗಾಯವಾಗಿದ್ದು, ಎದ್ದು ನಿಲ್ಲಲು ಸ್ವಲ್ಪ ಕಷ್ಟವಾಯಿತು ಎಂದು ಅಮಿತಾಭ್ ಬಚ್ಚನ್ ಸ್ವತಃ ತಿಳಿಸಿದ್ದಾರೆ. ಸಾಮಾನ್ಯವಾಗಿ ಕಾರ್ಯಕ್ರಮದ ವೇಳೆ ನಿಂತುಕೊಂಡೇ ತಮ್ಮ ಸ್ವಗತವನ್ನು ಹೇಳುವ ಅವರು, ಗಾಯದ ಕಾರಣ ಈ ಬಾರಿ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ. “ಸಾಮಾನ್ಯವಾಗಿ ನಾನು ನನ್ನ ಸ್ವಾಗತವನ್ನು ಮಧ್ಯದಲ್ಲಿ ನಿಂತು ಹೇಳುತ್ತೇನೆ. ಆದರೆ ಇಂದು ನನಗೆ ಮೊಣಕಾಲಿನ ಗಾಯವಾಗಿದೆ. ನಿನ್ನೆ ಚಿತ್ರೀಕರಣದ ವೇಳೆ ನಾನು ಜಾರಿ ಬಿದ್ದೆ” ಎಂದು ಅಮಿತಾಭ್ ಬಚ್ಚನ್ ತಿಳಿಸಿದ್ದಾರೆ. ಆದರೆ ಗಾಯ ಗಂಭೀರವಾಗಿಲ್ಲ ಎಂದು ಅವರು ಅಭಿಮಾನಿಗಳಿಗೆ ಸ್ಪಷ್ಟಪಡಿಸಿದ್ದು, ಆತಂಕಪಡುವ ಅಗತ್ಯವಿಲ್ಲ ಎಂಬ ಸಂದೇಶ ನೀಡಿದ್ದಾರೆ. ಸದ್ಯ ಅವರು ಚೇತರಿಸಿಕೊಂಡು ಮತ್ತೆ ಕಾರ್ಯಕ್ರಮದ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.
ಇದರ ನಡುವೆ ಅಮಿತಾಭ್ ಬಚ್ಚನ್ ಅಯೋಧ್ಯೆಯಲ್ಲಿ ಕೈಗೊಂಡಿರುವ ಮತ್ತೊಂದು ಯೋಜನೆಯೂ ಗಮನ ಸೆಳೆಯುತ್ತಿದೆ. ತಮ್ಮ ತಂದೆ ಹಾಗೂ ಖ್ಯಾತ ಕವಿ ಹರಿವಂಶ್ ರಾಯ್ ಬಚ್ಚನ್ ಅವರ ಸ್ಮರಣಾರ್ಥ ಧರ್ಮಶಾಲೆಯೊಂದನ್ನು ನಿರ್ಮಿಸಲು ಅವರು ಮುಂದಾಗಿದ್ದಾರೆ ಎನ್ನಲಾಗಿದೆ. ಅಯೋಧ್ಯೆಯಲ್ಲಿರುವ ತಮ್ಮ ಆಸ್ತಿಯಲ್ಲಿ ಧರ್ಮಶಾಲೆ ನಿರ್ಮಿಸಲು ಅನುಮತಿ ಕೋರಿ ಅಮಿತಾಭ್ ಬಚ್ಚನ್ ಅವರು ಅಯೋಧ್ಯಾ ಅಭಿವೃದ್ಧಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಈ ಕಟ್ಟಡದಲ್ಲಿ 20ಕ್ಕೂ ಹೆಚ್ಚು ಕೊಠಡಿಗಳು ಇರಲಿದ್ದು, ಅಯೋಧ್ಯೆಯ ಸರಯು ಯೋಜನೆಯೊಳಗಿನ ದಶರಥ ಪಥದಲ್ಲಿ ನಿರ್ಮಾಣವಾಗಲಿದೆ ಎನ್ನಲಾಗಿದೆ. ಅಮಿತಾಭ್ ಬಚ್ಚನ್ ಅವರು ಅಯೋಧ್ಯೆಯಲ್ಲಿ ‘ದಿ ಸರಯು’ ಯೋಜನೆಯಡಿ ಭೂಮಿ ಖರೀದಿಸಿದ್ದರು. ಇದೀಗ ಅದೇ ಪ್ರದೇಶದಲ್ಲಿ ತಂದೆಯ ಸ್ಮರಣಾರ್ಥ ಧರ್ಮಶಾಲೆ ನಿರ್ಮಿಸುವ ಯೋಜನೆಗೆ ಮುಂದಾಗಿರುವುದು ಸುದ್ದಿಯಾಗಿದೆ.