ಮುಂಬೈ, ಸೆ.27 (DaijiworldNews/AA): ಬಾಲಿವುಡ್ ನಟ ರಣಬೀರ್ ಕಪೂರ್ ಅವರು ತಮ್ಮ ಪತ್ನಿ ಆಲಿಯಾ ಭಟ್, ನಟ ವಿಕ್ಕಿ ಕೌಶಲ್, ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರೊಂದಿಗೆ ಕ್ಯಾಮೆರಾಗಳ ಮುಂದೆ ಪೋಸ್ ನೀಡುವಾಗ ಪಾಪರಾಜಿಗಳ ನಡವಳಿಕೆ ವಿರುದ್ಧ ಗರಂ ಆಗಿದ್ದಾರೆ.

ನಟ ರಣಬೀರ್ ಅವರು ತಮ್ಮ ಪತ್ನಿ ಆಲಿಯಾ ಭಟ್, ಲವ್ ಆ್ಯಂಡ್ ವಾರ್ ಚಿತ್ರದ ಸಹನಟ ವಿಕ್ಕಿ ಕೌಶಲ್ ಹಾಗೂ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರೊಂದಿಗೆ ಶನಿವಾರ ರಾತ್ರಿ ಡಿನ್ನರ್ಗೆ ತೆರಳಿದ್ದರು. ಡಿನ್ನರ್ ಮುಗಿಸಿ ಹೊರಬಂದಾಗ ರಣಬೀರ್-ಆಲಿಯಾ ದಂಪತಿ, ವಿಕ್ಕಿ ಹಾಗೂ ಬನ್ಸಾಲಿ ಒಟ್ಟಿಗೆ ನಿಂತು ಪಾಪರಾಜಿಗಳಿಗೆ ಪೋಸ್ ನೀಡುತ್ತಿದ್ದರು.
ಫೋಟೋ ಸೆಷನ್ ಮುಗಿಸಿ ಎಲ್ಲರೂ ಕಾರಿನತ್ತ ಹೊರಡುವಾಗ, ಛಾಯಾಗ್ರಾಹಕರೊಬ್ಬರು ರಣಬೀರ್ ಅವರಿಗೆ ಆಲಿಯಾ ಮತ್ತು ವಿಕ್ಕಿ ಜೊತೆ ಮತ್ತೊಮ್ಮೆ ಪೋಸ್ ನೀಡುವಂತೆ ಪದೇ ಪದೇ ಜೋರಾಗಿ ಕೂಗಾಡಲು ಶುರುಮಾಡಿದರು. ಇದರಿಂದ ಸಿಟ್ಟಾದ ರಣಬೀರ್, ವಾಪಸ್ ತಿರುಗಿ ನೋಡಿ 'ನೀನು ಜಾಸ್ತಿ ಮಾತನಾಡುತ್ತಿದ್ದೀಯಾ' ಎಂದು ರೊಚ್ಚಿಗೆದ್ದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.