ಬೆಂಗಳೂರು, ಸೆ.26 (DaijiworldNews/TA): ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜ್ಕುಮಾರ್ ಅವರ ಸರಳತೆ, ವ್ಯಕ್ತಿತ್ವ ಹಾಗೂ ಅಭಿನಯಕ್ಕೆ ಅಪಾರ ಅಭಿಮಾನಿಗಳಿದ್ದಾರೆ. ಕನ್ನಡಿಗರಷ್ಟೇ ಅಲ್ಲದೆ, ದೇಶದ ಹಲವು ಚಿತ್ರರಂಗಗಳ ಗಣ್ಯರೂ ರಾಜ್ಕುಮಾರ್ ಅವರ ಪ್ರತಿಭೆಯನ್ನು ಮೆಚ್ಚಿಕೊಂಡಿದ್ದಾರೆ. ತಮಿಳಿನ ಸೂಪರ್ಸ್ಟಾರ್ ರಜನಿಕಾಂತ್ ಕೂಡ ಡಾ. ರಾಜ್ಕುಮಾರ್ ಅವರ ದೊಡ್ಡ ಅಭಿಮಾನಿಯಾಗಿದ್ದು, ಅವರ ಬಗ್ಗೆ ಈ ಹಿಂದೆ ಆಡಿದ್ದ ಮಾತುಗಳ ವಿಡಿಯೋ ಇದೀಗ ಮತ್ತೆ ವೈರಲ್ ಆಗಿದೆ.

ರಜನಿಕಾಂತ್ ಅವರು ಡಾ. ರಾಜ್ಕುಮಾರ್ ಅವರನ್ನು ಕೊಂಡಾಡುತ್ತಾ ‘ಒಬ್ಬ ರಾಜ್ಕುಮಾರ್ 10 ಎಂಜಿಆರ್ಗೆ ಸಮ’ ಎಂದು ಹೇಳಿದ್ದರು. ರಾಜ್ಕುಮಾರ್ ಅವರ ಅಭಿನಯ ಸಾಮರ್ಥ್ಯವನ್ನು ವಿವರಿಸುವ ಸಂದರ್ಭದಲ್ಲಿ ರಜನಿಕಾಂತ್ ಈ ಮಾತುಗಳನ್ನು ಹೇಳಿದ್ದರು. ‘2.0’ ಚಿತ್ರದ ಪ್ರಚಾರದ ಸಂದರ್ಭದಲ್ಲಿ ತಮಿಳು ಮಾಧ್ಯಮಗಳೊಂದಿಗೆ ಮಾತನಾಡಿದ್ದ ರಜನಿಕಾಂತ್, ಡಾ. ರಾಜ್ಕುಮಾರ್ ಅವರ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ತಮಿಳು ಚಿತ್ರರಂಗದಲ್ಲಿ ಎಂ.ಜಿ. ರಾಮಚಂದ್ರನ್ (ಎಂಜಿಆರ್) ಅವರು ಮಾಸ್ ಹೀರೋ ಆಗಿ ಮಾತ್ರವಲ್ಲದೆ ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲೂ ದೊಡ್ಡ ಹೆಸರು ಮಾಡಿದ್ದರು. ಮತ್ತೊಂದೆಡೆ ಶಿವಾಜಿ ಗಣೇಶನ್ ಅವರು ತಮ್ಮ ಅದ್ಭುತ ಅಭಿನಯದಿಂದ ಪ್ರಸಿದ್ಧರಾಗಿದ್ದರು.
ಆದರೆ ಡಾ. ರಾಜ್ಕುಮಾರ್ ಅವರು ಯಾವುದೇ ರಾಜಕೀಯ ಹಿನ್ನೆಲೆಯ ಸಂಪರ್ಕವಿಲ್ಲದೆ, ಕೇವಲ ತಮ್ಮ ಅಭಿನಯ ಸಾಮರ್ಥ್ಯ, ವ್ಯಕ್ತಿತ್ವ ಹಾಗೂ ಸರಳತೆಯ ಮೂಲಕವೇ ಜನರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿದ್ದರು ಎಂದು ರಜನಿಕಾಂತ್ ಹೇಳಿದ್ದರು. ಬೆಂಗಳೂರಿನಲ್ಲಿ ನಡೆದ ಡಾ. ರಾಜ್ಕುಮಾರ್ ಸ್ಮಾರಕ ಲೋಕಾರ್ಪಣೆ ಸಮಾರಂಭದಲ್ಲೂ ರಜನಿಕಾಂತ್ ಇದೇ ಅಭಿಪ್ರಾಯವನ್ನು ಹೆಮ್ಮೆಯಿಂದ ಪುನರುಚ್ಚರಿಸಿದ್ದರು.
ಡಾ. ರಾಜ್ಕುಮಾರ್ ಅವರ ಮೇಲಿನ ರಜನಿಕಾಂತ್ ಅವರ ಅಭಿಮಾನಕ್ಕೆ ಮತ್ತೊಂದು ವಿಶೇಷ ಉದಾಹರಣೆಯೂ ಇದೆ. ರಜನಿಕಾಂತ್ ಅವರು ಸಾಮಾನ್ಯವಾಗಿ ಮತ್ತೊಬ್ಬ ನಟನ ಅಭಿಮಾನಿಯಾಗಿ ಸರದಿಯಲ್ಲಿ ನಿಂತು ಆಟೋಗ್ರಾಫ್ ಪಡೆಯುವವರಲ್ಲ. ಆದರೆ ಡಾ. ರಾಜ್ಕುಮಾರ್ ವಿಷಯದಲ್ಲಿ ಮಾತ್ರ ಇದಕ್ಕೆ ಅಪವಾದವಿತ್ತು. ಬೆಂಗಳೂರಿನಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಕೆಂಪಾಂಬುಧಿ ಕೆರೆಯ ಬಳಿ ಅಣ್ಣಾವ್ರು ಬಂದಿದ್ದಾಗ ತಾವೂ ಓಡಿಹೋಗಿ ಅವರ ಆಟೋಗ್ರಾಫ್ ಪಡೆದುಕೊಂಡಿದ್ದಾಗಿ ರಜನಿಕಾಂತ್ ಈ ಹಿಂದೆ ನೆನಪಿಸಿಕೊಂಡಿದ್ದರು. ವಿಶೇಷವೆಂದರೆ, ತಮ್ಮ ಜೀವನದಲ್ಲಿ ಪಡೆದ ಏಕೈಕ ಆಟೋಗ್ರಾಫ್ ಡಾ. ರಾಜ್ಕುಮಾರ್ ಅವರದ್ದೇ ಎಂದು ರಜನಿಕಾಂತ್ ಹೇಳಿಕೊಂಡಿದ್ದರು. ಡಾ. ರಾಜ್ಕುಮಾರ್ ಅವರ ಮೇಲಿನ ರಜನಿಕಾಂತ್ ಅವರ ಗೌರವವು ಅವರ ಸಿನಿಮಾ ವೃತ್ತಿಜೀವನದಲ್ಲೂ ಕಾಣಿಸಿಕೊಂಡಿದೆ. ರಾಜ್ಕುಮಾರ್ ಅಭಿನಯದ ಹಲವು ಯಶಸ್ವಿ ಕನ್ನಡ ಸಿನಿಮಾಗಳು ತಮಿಳಿಗೆ ರಿಮೇಕ್ ಆಗಿದ್ದು, ಅವುಗಳಲ್ಲಿ ರಜನಿಕಾಂತ್ ನಟಿಸಿದ್ದಾರೆ.
ಡಾ. ರಾಜ್ಕುಮಾರ್ ಅಭಿನಯದ ‘ಪ್ರೇಮದ ಕಾಣಿಕೆ’ ಚಿತ್ರ ತಮಿಳಿನಲ್ಲಿ ‘ಪೊಲ್ಲಾದವನ್’ ಆಗಿ ರಿಮೇಕ್ ಆಗಿತ್ತು. ಅದೇ ರೀತಿ ‘ನಾ ನಿನ್ನ ಮರೆಯಲಾರೆ’ ಚಿತ್ರ ‘ಪುದು ಕವಿದೈ’ ಆಗಿ ಹಾಗೂ ‘ಅನುರಾಗ ಅರಳಿತು’ ಚಿತ್ರ ‘ಮನ್ನನ್’ ಆಗಿ ತಮಿಳಿಗೆ ರಿಮೇಕ್ ಆಗಿತ್ತು. ಈ ಚಿತ್ರಗಳಲ್ಲಿ ರಜನಿಕಾಂತ್ ನಟಿಸಿ ಯಶಸ್ಸು ಕಂಡಿದ್ದರು. ಹೀಗಾಗಿ ಕನ್ನಡದ ಅಣ್ಣಾವ್ರು ಮತ್ತು ತಮಿಳಿನ ತಲೈವಾ ನಡುವಿನ ಈ ಸಿನಿಮೀಯ ಅನುಬಂಧವೂ ಅಭಿಮಾನಿಗಳಲ್ಲಿ ವಿಶೇಷ ಸ್ಥಾನ ಪಡೆದಿದೆ. ಡಾ. ರಾಜ್ಕುಮಾರ್ ಅವರ ಮೇಲಿನ ತಮ್ಮ ಪ್ರೀತಿ ಮತ್ತು ಗೌರವವನ್ನು ರಜನಿಕಾಂತ್ ಹಲವು ಸಂದರ್ಭಗಳಲ್ಲಿ ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. ಇದೀಗ ಅವರ ಹಳೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಣ್ಣಾವ್ರ ಅಭಿಮಾನಿಗಳ ಗಮನ ಸೆಳೆಯುತ್ತಿದೆ.