ಹೈದರಾಬಾದ್, ಸೆ.21 (DaijiworldNews/AK): ಖ್ಯಾತ ಪೌರಾಣಿಕ ಧಾರಾವಾಹಿ‘ಮಹಾಭಾರತದಲ್ಲಿ ಭೀಮನ ಪಾತ್ರದ ಮೂಲಕ ಮನೆಮಾತಾಗಿದ್ದ ನಟ ಹಾಗೂ ವೃತ್ತಿಪರ ಕುಸ್ತಿಪಟು (WWE ಖ್ಯಾತಿಯ) ಸೌರವ್ ಗುರ್ಜರ್ಲೈಂಗಿಕ ದೌರ್ಜನ್ಯ ಮತ್ತು ವಂಚನೆ ಪ್ರಕರಣದಲ್ಲಿ ಹೈದರಾಬಾದ್ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಶೋಷಣೆ ನಡೆಸಿದ್ದಾರೆ ಎಂದು ಆರೋಪಿಸಿ 29 ವರ್ಷದ ಯುವತಿಯೊಬ್ಬರು ನೀಡಿದ ದೂರಿನನ್ವಯ ಹೈದರಾಬಾದ್ನ ಗಚಿಬೌಲಿ ಠಾಣಾ ಪೊಲೀಸರು ಸೌರವ್ ಗುರ್ಜರ್ ಅವರನ್ನು ಬಂಧಿಸಿದ್ದಾರೆ. ಈ ಬಂಧನ ಸೆಪ್ಟೆಂಬರ್ 17ರಂದೇ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಪ್ರಕರಣ ದಾಖಲಾದ ಬೆನ್ನಲ್ಲೇ ಸೌರವ್ ಗುರ್ಜರ್ ವಿರುದ್ಧ ಪೊಲೀಸರು ಲುಕ್ ಔಟ್ ನೋಟಿಸ್ (LOC) ಜಾರಿ ಮಾಡಿದ್ದರು. ಸೆಪ್ಟೆಂಬರ್ 17ರಂದು ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ದೇಶ ಬಿಟ್ಟು ವಿದೇಶಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ, ವಲಸೆ ಅಧಿಕಾರಿಗಳು ಹಾಗೂ ಪೊಲೀಸರು ಅವರನ್ನು ವಶಕ್ಕೆ ಪಡೆದರು. ಬಳಿಕ ಆರೋಪಿಯನ್ನು ಮುಂಬೈನಿಂದ ಹೈದರಾಬಾದ್ಗೆ ಕರೆತರಲಾಯಿತು.
ವಿಚಾರಣೆ ನಡೆಸಿದ ಪೊಲೀಸರು, ಸೆಪ್ಟೆಂಬರ್ 20 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ. ಸದ್ಯ ಸೌರವ್ ಜೈಲು ಪಾಲಾಗಿದ್ದು, ಪೊಲೀಸರು ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಮೂಲತಃ ಮಧ್ಯಪ್ರದೇಶದವರಾದ ಸೌರವ್ ಗುರ್ಜರ್, ರಾಷ್ಟ್ರ ಮಟ್ಟದ ಕಿಕ್ಬಾಕ್ಸಿಂಗ್ ಹಾಗೂ ಕುಸ್ತಿಪಟುವಾಗಿದ್ದರು. ಖಾಸಗಿ ವಾಹಿನಿಯ ಜನಪ್ರಿಯ ‘ಮಹಾಭಾರತ’ ಧಾರಾವಾಹಿಯಲ್ಲಿ ‘ಭೀಮ’ನ ಪಾತ್ರ ನಿರ್ವಹಿಸುವ ಮೂಲಕ ದೇಶಾದ್ಯಂತ ಭಾರಿ ಜನಪ್ರಿಯತೆ ಗಳಿಸಿದ್ದರು.