ಮುಂಬೈ, ಸೆ.21 (DaijiworldNews/AA): ಬಿಹಾರದ ಯುವ ಶಾಸಕಿ ಹಾಗೂ ಪ್ರಸಿದ್ಧ ಗಾಯಕಿ ಮೈಥಿಲಿ ಠಾಕೂರ್ ಇತ್ತೀಚೆಗೆ ಮುಂಬೈನ ಲಾಲ್ಬಾಗ್ಚಾ ರಾಜ ಗಣಪತಿ ದರ್ಶನಕ್ಕೆ ರೋಲ್ಸ್ ರಾಯ್ಸ್ ಕಾರಿನಲ್ಲಿ ಬಂದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಟೀಕೆಗಳು ವ್ಯಕ್ತವಾಗಿತ್ತು. ಇದೀಗ ಈ ಟೀಕೆಗಳ ವಿರುದ್ಧ ಬಿಜೆಪಿ ಸಂಸದೆ ಕಂಗನಾ ರಣಾವತ್ ಕಿಡಿಕಾರಿದ್ದು, ಯುವ ಶಾಸಕಿಯ ಬೆಂಬಲಕ್ಕೆ ನಿಂತಿದ್ದಾರೆ.

ಸೆಪ್ಟೆಂಬರ್ 15ರಂದು ಮೈಥಿಲಿ ಠಾಕೂರ್ ಮುಂಬೈನ ಪ್ರಸಿದ್ಧ ಲಾಲ್ಬಾಗ್ಚಾ ರಾಜ ಪಂಡಾಲ್ಗೆ ಭೇಟಿ ನೀಡಿದ್ದರು. ನೀಲಿ ಬಣ್ಣದ ರೋಲ್ಸ್ ರಾಯ್ಸ್ ಕುಲ್ಲಿನಾನ್ ಐಷಾರಾಮಿ ಕಾರಿನಲ್ಲಿ ಅವರು ಆಗಮಿಸಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ರಾಜಕಾರಣಿಗೆ ಇಷ್ಟೊಂದು ಐಷಾರಾಮಿ ಕಾರು ಬೇಕೇ ಎಂದು ಹಲವರು ಟೀಕಿಸಿದ್ದರು.
ಈ ಟೀಕೆಗಳ ಬಗ್ಗೆ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪ್ರತಿಕ್ರಿಯಿಸಿರುವ ಕಂಗನಾ ರಣಾವತ್, "ರಾಜಕಾರಣಿಗಳು ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಕಾರಣಕ್ಕೆ ಅವರು ಐಶಾರಾಮಿ ಜೀವನಶೈಲಿಯನ್ನು ಏಕೆ ತ್ಯಜಿಸಬೇಕು? ರಾಜಕಾರಣಿಗಳು ಉತ್ತಮ ಜೀವನ ನಡೆಸುವುದನ್ನು ನೋಡಿದಾಗಲೆಲ್ಲಾ ಕೆಲವರು ಕಿಡಿಕಾರಲು ಪ್ರಾರಂಭಿಸುತ್ತಾರೆ. ಈಗ ನಮ್ಮ ಯುವ ಶಾಸಕಿ ಐಷಾರಾಮಿ ಕಾರು ಬಳಸಿದ್ದಕ್ಕಾಗಿ ಟ್ರೋಲ್ ಆಗುತ್ತಿದ್ದಾರೆ" ಎಂದು ತಿಳಿಸಿದ್ದಾರೆ.
"ನಾವು ಸಮಾಜ ಸೇವೆಗೆ ಒಲವು ತೋರಬಹುದು. ಆದರೆ, ನಮಗೆ ನಮ್ಮದೇ ಆದ ವೃತ್ತಿ, ಜೀವನ ಮತ್ತು ಜನಪ್ರಿಯತೆಯೂ ಇದೆ. ನಾವು ನಿಸ್ವಾರ್ಥವಾಗಿ ಸಾರ್ವಜನಿಕ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತೇವೆ. ಆದರೆ, ಕೆಲವರು ನಾವು ಚೆನ್ನಾಗಿ ಬದುಕುವುದನ್ನು ನೋಡಿದರೆ ತುಂಬಾ ನೋವಾಗುತ್ತದೆ, ಏಕೆ? ನಾವೂ ಚೆನ್ನಾಗಿ ಬದುಕಲು ಸಾಧ್ಯವಿಲ್ಲವೇ? ನಮಗೆ ಸಾರ್ವಜನಿಕ ಹಣದಲ್ಲಿ ಆಸಕ್ತಿ ಇಲ್ಲ. ಆದರೆ, ನಾವು ಬಡವರಾಗಿ ಮತ್ತು ನಿರ್ಜೀವವಾಗಿ ಉಳಿಯಬೇಕೆಂದು ನಿರೀಕ್ಷಿಸುವುದು ಒಳ್ಳೆಯದಲ್ಲ" ಎಂದು ಆಕ್ರೋಶ ಹೊರಹಾಕಿದ್ದಾರೆ.