ಮುಂಬೈ, ಸೆ.20 (DaijiworldNews/AA): ಅಸಹ್ಯಕರ ರೀತಿಯಲ್ಲಿ ಫೋಟೋ ಮತ್ತು ವೀಡಿಯೋ ಚಿತ್ರೀಕರಿಸುವ ಪ್ಯಾಪರಾಜಿಗಳಿಗೆ ತಕ್ಷಣವೇ ತಿರುಗಿ ಒಂದೇ ಕಪಾಳಮೋಕ್ಷ ಮಾಡಿ ಎಂದು ಬಾಲಿವುಡ್ ನಟ ಸಲ್ಮಾನ್ ಖಾನ್ ನಟಿಯರಿಗೆ ಕಿವಿಮಾತು ಹೇಳಿದ್ದಾರೆ.

ಈ ಬಗ್ಗೆ ರಿಯಾಲಿಟಿ ಶೋವೊಂದರಲ್ಲಿ ಮಾತನಾಡಿರುವ ಅವರು, "ಕಾರಿನಿಂದ ಇಳಿಯುವಾಗ ಅಥವಾ ಕಾರು ಹತ್ತುವಾಗ ಅಸಹ್ಯಕರ ಕೋನದಲ್ಲಿ, ಹಿಂಭಾಗದಿಂದ ಫೋಟೋಗಳನ್ನು ಕ್ಲಿಕ್ಕಿಸುತ್ತಾರೆ. ಇದನ್ನು ಯಾವ ನಟಿಯರೂ ಇಷ್ಟಪಡುವುದಿಲ್ಲ. ಕೆಲವರು ಸಮ್ಮತಿಸಬಹುದು, ಆದರೆ ಇಷ್ಟವಿಲ್ಲದವರ ಪರಿಸ್ಥಿತಿ ಏನು?" ಎಮದು ಪ್ರಶ್ನಿಸಿದ್ದಾರೆ.
"ನಮ್ಮ ಕುಟುಂಬದ ಹೆಣ್ಮಗಳು ನಡೆದುಕೊಂಡು ಹೋಗುವಾಗಲೂ ಹಿಂದಿನಿಂದ ಫೋಟೋ ತೆಗೆದು ಇವರು ಯಾರು ಅಂತ ಗುರುತಿಸಿ ಎಂದು ಕ್ಯಾಪ್ಷನ್ ಹಾಕುತ್ತಾರೆ. ಇವರಿಗೆ ಈ ರೀತಿ ಮಾಡಲು ಅಧಿಕಾರ ಕೊಟ್ಟವರು ಯಾರು?" ಎಂದು ಕಿಡಿಕಾರಿದ್ದಾರೆ.
"ಇದು ಅತ್ಯಂತ ಅಸಹ್ಯಕರ ಮನಸ್ಥಿತಿ. ನಿಮಗೂ ಅಥವಾ ಯಾವುದೇ ಹೆಣ್ಣುಮಕ್ಕಳಿಗೆ ಇಂತಹ ಅನುಭವವಾದರೆ, ತಕ್ಷಣವೇ ತಿರುಗಿ ಒಂದೇ ಕಪಾಳಮೋಕ್ಷ ಮಾಡಿ. 'ನಿಮ್ಮ ತಾಯಿ-ತಂಗಿಯರ ಇಂಥ ಫೋಟೋಗಳನ್ನು ತೆಗೆದು ನಮಗೆ ತೋರಿಸಿ' ಅಂತ ಅವರ ಬಳಿ ಕೇಳಿ. ಪ್ರತಿಯೊಂದು ಸಮಾರಂಭದಲ್ಲೂ ಇವರು ಇದನ್ನೇ ಮಾಡುತ್ತಿದ್ದಾರೆ. ನನಗೆ ತಿಳಿದಿರುವ ಶೇ. 90ರಷ್ಟು ನಟಿಯರಿಗೆ ಇದು ಸಂಪೂರ್ಣವಾಗಿ ಇಷ್ಟವಿಲ್ಲ. ಇಂತಹ ಫೋಟೋಗಳನ್ನು ತೆಗೆಯುವವರು ಯಾರು ಎಂಬುದು ನನಗೆ ತಿಳಿದರೆ ಖಂಡಿತ ಬಿಡುವುದಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದರು.