ಕೊಚ್ಚಿ, ಸೆ.20 (DaijiworldNews/TA): ಮಲಯಾಳಂ ಚಿತ್ರರಂಗದ ನಟಿ ಮಂಜು ವಾರಿಯರ್ ಅವರ ವಿರುದ್ಧ ಮಾನಹಾನಿಕರ ಹಾಗೂ ಆಕ್ಷೇಪಾರ್ಹ ವಿಷಯಗಳನ್ನು ಪ್ರಕಟಿಸಿದ ಆರೋಪಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಸನಲ್ ಕುಮಾರ್ ಶಶಿಧರನ್ ಹಾಗೂ ಇತರ ಇಬ್ಬರಿಗೆ ಕೊಚ್ಚಿಯ ಮೂರನೇ ಹೆಚ್ಚುವರಿ ಮುನ್ಸಿಫ್ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.

ನಟಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶೆ ರೀಜಾ ಆರ್. ನಾಯರ್, ಸನಲ್ ಕುಮಾರ್ ಶಶಿಧರನ್, ಆನ್ಲೈನ್ ನ್ಯೂಸ್ ಪೋರ್ಟಲ್ ನಡೆಸುತ್ತಿರುವ ಶಾತನ್ ಸ್ಕರಿಯಾ ಹಾಗೂ ಮೆಟಾ ಪ್ಲಾಟ್ಫಾರ್ಮ್ಸ್ ಸಂಸ್ಥೆಗೆ ನೋಟಿಸ್ ಜಾರಿಗೊಳಿಸಿದ್ದಾರೆ. ಅರ್ಜಿಯ ವಿಚಾರಣೆ ಪೂರ್ಣಗೊಳ್ಳುವವರೆಗೆ ಮಂಜು ವಾರಿಯರ್ ವಿರುದ್ಧ ಮಾನಹಾನಿಕರ ವಿಷಯಗಳನ್ನು ಪ್ರಕಟಿಸುವುದಕ್ಕೆ ಸಂಬಂಧಿಸಿದಂತೆ ಸನಲ್ ಕುಮಾರ್ ಶಶಿಧರನ್ ವಿರುದ್ಧ ಮಧ್ಯಂತರ ತಡೆಆಜ್ಞೆ ನೀಡಲಾಗಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 5ಕ್ಕೆ ಮುಂದೂಡಲಾಗಿದೆ.
ಮಂಜು ವಾರಿಯರ್ ಪರ ವಕೀಲರಾದ ಶಾಂತಿ ಎಂ. ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಸನಲ್ ಕುಮಾರ್ ಶಶಿಧರನ್ ಅವರು ನಟಿಯ ವಿರುದ್ಧ ನಿರಂತರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಹಾಗೂ ಮಾನಹಾನಿಕರ ವಿಷಯಗಳನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇಂತಹ ವಿಷಯಗಳ ಪ್ರಸಾರವನ್ನು ತಡೆಯುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಲಾಗಿತ್ತು ಎಂದು ತಿಳಿಸಿದ್ದಾರೆ. ಇದೇ ವೇಳೆ, ಮಂಜು ವಾರಿಯರ್ ಅವರನ್ನು ತೇಜೋವಧೆ ಮಾಡುವ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಲಾಗಿರುವ ಆಕ್ಷೇಪಾರ್ಹ ಮತ್ತು ಸುಳ್ಳು ವಿಷಯಗಳನ್ನು ತೆಗೆದುಹಾಕುವಂತೆ ಮೆಟಾ ಸಂಸ್ಥೆಗೆ ನ್ಯಾಯಾಲಯ ನಿರ್ದೇಶನ ನೀಡಿದೆ ಎಂದು ವಕೀಲರು ತಿಳಿಸಿದ್ದಾರೆ.
ಮತ್ತೊಂದೆಡೆ, ಸನಲ್ ಕುಮಾರ್ ಶಶಿಧರನ್ ಅವರು ಪ್ರಸ್ತುತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಹೇಮಾ ಸಮಿತಿ ವರದಿಯನ್ನು ಸಂಪೂರ್ಣವಾಗಿ ಬಿಡುಗಡೆ ಮಾಡಬೇಕು, ವರದಿಯಲ್ಲಿ ಉಲ್ಲೇಖಿಸಿರುವ ಆರೋಪಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಹಾಗೂ ಮಂಜು ವಾರಿಯರ್ ನೀಡಿದ ದೂರುಗಳ ಆಧಾರದ ಮೇಲೆ ತಮ್ಮ ವಿರುದ್ಧ ದಾಖಲಾಗಿರುವ ಎರಡು ಪ್ರಕರಣಗಳ ಹಿಂದಿರುವ ಪಿತೂರಿಯ ಕುರಿತು ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸುತ್ತಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆಯಲ್ಲಿ ಎರಡೂ ಕಡೆಯ ವಾದಗಳನ್ನು ನ್ಯಾಯಾಲಯ ಪರಿಗಣಿಸಲಿದೆ.