ಮುಂಬೈ, ಸೆ.18 (DaijiworldNews/AK): ಬಾಲಿವುಡ್ನ ಖ್ಯಾತ ನಟ ರಣವೀರ್ ಸಿಂಗ್ ಮುಂಬೈನ ಪ್ರಸಿದ್ಧ ಲಾಲ್ಬಾಗ್ಚಾ ರಾಜ ಗಣಪತಿಯ ದರ್ಶನ ಪಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

ಇದೇ ವೇಳೆ ಗಣೇಶ ಚತುರ್ಥಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ರಣವೀರ್ ದೊಡ್ಡ ನಿರ್ಧಾರ ಒಂದನ್ನು ಪ್ರಕಟಿಸಿದ್ದಾರೆ. ‘ಸೇವಾ ಸಂಕಲ್ಪ ಅಭಿಯಾನ’ದ ಭಾಗವಾಗಿ 1,000 ಹೆಣ್ಣುಮಕ್ಕಳ ಶಿಕ್ಷಣದ ಜವಾಬ್ದಾರಿ ಹೊರಲು ಅವರು ಸಂಕಲ್ಪ ಮಾಡಿದ್ದಾರೆ. ಈ ಸಾಮಾಜಿಕ ಕಾರ್ಯದಿಂದ ಬಪ್ಪನ ಅನುಗ್ರಹ ಸಿಗಲಿದೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಅವರಿಗೆ ಸಿನಿಮಾವಷ್ಟೇ ಅಲ್ಲದೆ ವೈಯಕ್ತಿಕ ಜೀವನದಲ್ಲೂ ಹಲವು ಖುಷಿಯ ಘಟನೆಗಳು ನಡೆದಿವೆ. ಹೀಗಾಗಿ ಗಣೇಶನಿಗೆ ಕೃತಜ್ಞತೆ ಸಲ್ಲಿಸಲು ಅವರು ಆಗಮಿಸಿದ್ದರು. ಇದೇ ವೇಳೆಯಲ್ಲಿ ರಣವೀರ್ ಒಂದು ಮಹತ್ವದ ಮತ್ತು ಪ್ರಶಂಸನೀಯ ನಿರ್ಧಾರವನ್ನು ಕೈಗೊಂಡು ಎಲ್ಲರ ಗಮನ ಸೆಳೆದಿದ್ದಾರೆ.
ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ ಸಿನಿಮಾ ದೊಡ್ಡ ಯಶಸ್ಸು ಕಂಡಿದೆ. ಇದರ ಬೆನ್ನಲ್ಲೇ ಅವರು ಮತ್ತು ಪತ್ನಿ ದೀಪಿಕಾ ಪಡುಕೋಣೆ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಗಣಪನ ಆಶೀರ್ವಾದದಿಂದ ತಮ್ಮ ಕುಟುಂಬದಲ್ಲಿ ಸಂತಸ ಮನೆಮಾಡಿದೆ ಎಂದು ನಟ ಹೇಳಿದ್ದಾರೆ. ಮುಂಬರುವ ಜೀವನದ ಹಾದಿಗೆ ಗಣಪತಿ ಬಪ್ಪನ ಕೃಪೆ ಹೀಗೆಯೇ ಇರಲಿ ಎಂದು ಅವರು ಪ್ರಾರ್ಥಿಸಿದ್ದಾರೆ.