ಮುಂಬೈ, ಸೆ.16 (DaijiworldNews/AA): ರಸ್ತೆ ಹಾಗೂ ಏರ್ಪೋರ್ಟ್ಗಳಲ್ಲಿ ಇರುವ ತಮ್ಮ ಬೃಹತ್ ಜಾಹೀರಾತುಗಳನ್ನು ಮಕ್ಕಳು ನೋಡಿದಾಗ ತಮಗೆ ಸಂಕಟ ಮತ್ತು ಮುಜುಗರವಾಗುತ್ತದೆ ಎಂದು ಬಾಲಿವುಡ್ ನಟಿ ಕರೀನಾ ಕಪೂರ್ ತಿಳಿಸಿದ್ದಾರೆ.

ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, 'ನನ್ನ ಮಕ್ಕಳು ಈಗ ಜಾಹೀರಾತುಗಳನ್ನು ಜಾಸ್ತಿ ಗಮನಿಸುತ್ತಿದ್ದಾರೆ. ನನ್ನ ಜಾಹೀರಾತುಗಳು ಅವರ ಕಣ್ಣಿಗೆ ಬಿದ್ದಾಗ ನನಗೆ ಏನು ಮಾಡಬೇಕೆಂದು ತೋಚುವುದಿಲ್ಲ. ಅವರು ಅದನ್ನು ನೋಡಬೇಕೋ ಬೇಡವೋ ಎಂಬ ಗೊಂದಲ ನನ್ನಲ್ಲಿ ಸದಾ ಇರುತ್ತದೆ' ಎಂದು ಹೇಳಿದ್ದಾರೆ.
"ಏರ್ಪೋರ್ಟ್ನಲ್ಲಿರುವ ನನ್ನ ಜಾಹೀರಾತಿನಲ್ಲಿ ನಾನು ಪೌಟ್ ಮಾಡಿರುವುದನ್ನು ನೋಡಿ ತೈಮೂರ್ ಪ್ರಶ್ನೆ ಮಾಡಿದ್ದನು. 'ಅಮ್ಮ ನೀನ್ಯಾಕೆ ಆ ರೀತಿ ಮಾಡುತ್ತಿದ್ದೀಯಾ?' ಎಂದು ಕೇಳಿದನು. ನಾನು ಅದನ್ನು ಬಿಟ್ಟು ಮುಂದಕ್ಕೆ ನಡೆಯಲು ಹೇಳಿದೆ. ಆದರೂ ಅವನು ಮತ್ತೆ ಮತ್ತೆ ಅದನ್ನೇ ಕೇಳುತ್ತಿದ್ದನು" ಎಂದು ಏರ್ಪೋರ್ಟ್ನಲ್ಲಿ ನಡೆದ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ.
"ನನ್ನ ಮಕ್ಕಳಿಗೆ ಸ್ವಂತ ಫೋನ್ ಇಲ್ಲ. ಆದರೆ ಅವರು ತಮ್ಮ ನ್ಯಾನಿ ಫೋನ್ ಅನ್ನೇ ತಮ್ಮದೆಂದು ಭಾವಿಸುತ್ತಾರೆ. ಗೇಮ್ಸ್ ಆಡುವಾಗ ನಾನು ಫೋನ್ ಕಸಿದುಕೊಳ್ಳುತ್ತೇನೆ. ಆಗ 'ನೀವು ಮತ್ತು ಅಪ್ಪ ಕೂಡ ಫೋನ್ನಲ್ಲೇ ಮಾತನಾಡುತ್ತೀರಲ್ಲ' ಎಂದು ತೈಮೂರ್ ಎದುರು ಪ್ರಶ್ನೆ ಹಾಕುತ್ತಾನೆ" ಎಂದಿದ್ದಾರೆ.