ಮುಂಬೈ, ಸೆ.15 (DaijiworldNews/AA): ಪೌರಕಾರ್ಮಿಕನ ಕೆಲಸ ಸಿಗಬೇಕಾದರೂ ಸಹ ಅದಕ್ಕೆ ಅರ್ಹತೆ ಹಾಗೂ ಪ್ರತಿಭೆ ಬೇಕಾಗುತ್ತದೆ. ಹೀಗಾಗಿ ಶಾಂತವಾಗಿ ಕುಳಿತು ನನ್ನ ವೀಡಿಯೋ ನೋಡಿ ಅಳುವುದು ಉತ್ತಮ ಎಂದು ನಟಿ ರಾಖಿ ಸಾವಂತ್ ವಿರುದ್ಧ ಬಾಲಿವುಡ್ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಕಿಡಿಕಾರಿದ್ದಾರೆ.

ಇತ್ತೀಚೆಗೆ ಪಾಡ್ಕಾಸ್ಟ್ ವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಕಂಗನಾ ರಣಾವತ್ ಹಾಗೂ ಸ್ಮೃತಿ ಇರಾನಿ ಕುರಿತು ರಾಖಿ ಸಾವಂತ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಂಗನಾ, "ಸೋತ ಜನರು ಯಶಸ್ವಿ ಮಹಿಳೆಯರ ಚಾರಿತ್ರ್ಯ ವಧೆ ಮಾಡಲು ಯತ್ನಿಸುತ್ತಾರೆ ಎಂದು ಕಂಗನಾ ಹೇಳಿದ್ದಾರೆ. ತಮ್ಮ ಅಸೂಯೆ ಮತ್ತು ವೈಫಲ್ಯ ಮುಚ್ಚಿಕೊಳ್ಳಲು ಹೀಗೆ ಮಾಡುತ್ತಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂತಹ ದಾಳಿಗಳಿಗೆ ತಲೆಕೆಡಿಸಿಕೊಳ್ಳಬಾರದು. ಪ್ರತಿಯೊಬ್ಬರಿಗೂ ಅನಗತ್ಯವಾಗಿ ಉತ್ತರ ನೀಡುವುದನ್ನು ನಿಲ್ಲಿಸಬೇಕು. ಯಶಸ್ಸಿಗೆ ಯಾವುದೇ ಶಾರ್ಟ್ಕಟ್ ಇಲ್ಲ ಎಂಬುದನ್ನು ಪ್ರತಿಯೊಬ್ಬರೂ ನೆನಪಿಡಬೇಕು. ನಿಮಗಾಗಿ ಯಾರೂ ಕಾಯುತ್ತ ಕುಳಿತಿಲ್ಲ ಎಂದಿದ್ದಾರೆ.
ತಮ್ಮ ವಿರುದ್ಧ ಮಾತನಾಡುವ ಎಲ್ಲರನ್ನೂ ಕಂಗನಾ ಇದೇ ವೇಳೆ ತರಾಟೆಗೆ ತೆಗೆದುಕೊಂಡಿದ್ದಾರೆ. ತಮ್ಮ ಯಶಸ್ಸಿನ ಶೇಕಡಾ ಒಂದರಷ್ಟನ್ನೂ ಸಾಧಿಸದವರ ಮಾತು ತಮಗೆ ಮುಖ್ಯವಲ್ಲ ಎಂದಿದ್ದಾರೆ. ಮಾಧ್ಯಮಗಳ ಗಮನ ಸೆಳೆಯಲು ಹಲವರು ತಮ್ಮ ಹೆಸರನ್ನು ಬಳಸಿಕೊಳ್ಳುತ್ತಾರೆ. ತಮ್ಮ ಮಟ್ಟಕ್ಕೆ ಬೆಳೆದ ನಂತರವೇ ಅಭಿಪ್ರಾಯ ಹಂಚಿಕೊಳ್ಳಲಿ ಎಂದು ತಿಳಿಸಿದ್ದಾರೆ.