ಹೈದರ್ಬಾದ್, ಆ. 29 (DaijiworldNews/AK): ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ರುತ್ ಪ್ರಭು ಅವರು ಸದ್ಯ ತಾಯ್ತನದ ಸಂಭ್ರಮದಲ್ಲಿದ್ದಾರೆ. ತಮ್ಮ ಜೀವನದ ಈ ವಿಶೇಷ ಹಂತವನ್ನು ಅವರು ಆನಂದಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ನಟಿ, ತಮ್ಮ ಪ್ರೆಗ್ನೆನ್ಸಿ ದಿನಗಳ ಅನುಭವಗಳನ್ನು ಹಾಗೂ ಸುಂದರ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಮುಕ್ತವಾಗಿ ಹಂಚಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಆಸ್ಕ್ ಮಿ ಎನಿಥಿಂಗ್ ಸೆಷನ್ ನಡೆಸಿದ್ದರು. ಈ ಸಂವಾದದಲ್ಲಿ ಈಗತಾನೇ ತಾಯಿ ಆದವರು ಅನುಭವಗಳನ್ನು ಹಂಚಿಕೊಳ್ಳಲು ಸಮಂತಾ ಕೋರಿದ್ದರು. ಓರ್ವ ಮಹಿಳೆ ತಮ್ಮ ತೂಕ ಹೆಚ್ಚಾಗುತ್ತಿರುವ ಬಗ್ಗೆ ಬರೆದುಕೊಂಡಿದ್ದರು. ಅದಕ್ಕೆ ಉತ್ತರಿಸಿದ ಸಮಂತಾ, ‘ನಾನು ಕೂಡ ಈಗಾಗಲೇ 11 ಕೆಜಿ ತೂಕ ಹೆಚ್ಚಿಸಿಕೊಂಡಿದ್ದೇನೆ’ ಎಂದು ತಿಳಿಸಿದ್ದರು
ಇನ್ನೋರ್ವ ಅಭಿಮಾನಿ ಈ ಸುಂದರ ಕ್ಷಣವನ್ನು ಆನಂದಿಸುತ್ತಿದ್ದೀರಾ ಎಂದು ಪ್ರಶ್ನಿಸಿದ್ದರು. ಅದಕ್ಕೆ ನಟಿ, ‘ಸಂಪೂರ್ಣ ಮನಸ್ಸಿನಿಂದ ಆನಂದಿಸುತ್ತಿದ್ದೇನೆ’ ಎಂದು ಹೇಳಿದರು. ಹೊಸ ತಾಯಂದಿರ ದೈನಂದಿನ ಕೆಲಸಗಳ ಬಗ್ಗೆ ಕೇಳಿದ್ದಕ್ಕೆ, ‘ಅದು ನಿಜಕ್ಕೂ ಪೂರ್ಣಾವಧಿ ಕೆಲಸದಂತಿದೆ’ ಎಂದಿದ್ದಾರೆ. ಇಡೀ ಸಂವಾದವು ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿತು.
ಇತ್ತೀಚೆಗಷ್ಟೇ ಸಮಂತಾ ತಮ್ಮ ಪತಿ ರಾಜ್ ನಿಡಿಮೋರು ಜೊತೆ ಬೇಬಿಮೂನ್ ತೆರಳಿದ್ದರು. ಅಲ್ಲಿನ ಸುಂದರ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ತಮ್ಮ ಫಿಟ್ನೆಸ್ ಹಾಗೂ ವರ್ಕೌಟ್ ವೀಡಿಯೊಗಳನ್ನು ಕೂಡ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಪ್ರಸ್ತುತ ನಟಿ ವಿಶ್ರಾಂತಿಯಲ್ಲಿದ್ದಾರೆ.