ಬೆಂಗಳೂರು, ಆ. 28 (DaijiworldNews/AA): ಪ್ರತಿಷ್ಠಿತ ಫೋರ್ಬ್ಸ್ ಇಂಡಿಯಾ ಬಿಡುಗಡೆ ಮಾಡಿರುವ ದೇಶದ ಪ್ರಮುಖ 100 ಗಣ್ಯರ ಪಟ್ಟಿಯಲ್ಲಿ ಸ್ಯಾಂಡಲ್ವುಡ್ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಸ್ಥಾನ ಪಡೆದುಕೊಂಡಿದ್ದಾರೆ.

ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ನಟ, ನಿರ್ದೇಶಕ ಹಾಗೂ ಬರಹಗಾರ-ಈ ಮೂರೂ ವಿಭಾಗಗಳಲ್ಲಿ ಆಯ್ಕೆಯಾದ ಏಕೈಕ ವ್ಯಕ್ತಿ ರಿಷಬ್ ಶೆಟ್ಟಿ ಎಂಬುದು ವಿಶೇಷ. ಈ ಮೂಲಕ ರಿಷಬ್ ಶೆಟ್ಟಿ ಕನ್ನಡ ಚಿತ್ರರಂಗವನ್ನ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಗುರುತಿಸಲು ಕಾರಣರಾಗಿದ್ದಾರೆ.
ಇನ್ನು ರಿಷಬ್ ಶೆಟ್ಟಿ ಜೊತೆಗೆ ದಕ್ಷಿಣದ ಅಲ್ಲು ಅರ್ಜುನ್, ಮೋಹನ್ಲಾಲ್, ಮಮ್ಮುಟಿ, ದುಲ್ಕರ್ ಸಲ್ಮಾನ್, ಕಲ್ಯಾಣಿ ಪ್ರಿಯದರ್ಶನ್, ಆರ್ ಮಾಧವನ್, ರಜನೀಕಾಂತ್, ಅನಿರುದ್ಧ್ ರವಿಚಂದ್ರನ್, ಎಆರ್ ರೆಹಮಾನ್, ರಾಮ್ ಚರಣ್, ಸೂರ್ಯ ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಬಾಲಿವುಡ್ ನಟರಾದ ಅಮಿತಾಬ್ ಬಚ್ಚನ್, ಆಮಿರ್ ಖಾನ್, ಶಾರುಖ್ ಖಾನ್, ರಣ್ವೀರ್ ಸಿಂಗ್, 'ಧುರಂಧರ್' ನಿರ್ದೇಶಕ ಆದಿತ್ಯ ಧರ್ ಮತ್ತು ಅವರ ಪತ್ನಿ ಯಾಮಿ ಗೌತಮ್ ಇನ್ನೂ ಹಲವರು ಈ ಪಟ್ಟಿಯಲ್ಲಿದ್ದಾರೆ. ಇನ್ನು ಬರಹಗಾರರ ವಿಭಾಗದಲ್ಲಿ ಕನ್ನಡದ ಖ್ಯಾತ ಬರಹಗಾರ್ತಿ ಭಾನು ಮುಷ್ತಾಕ್ ಕೂಡ ಸ್ಥಾನ ಪಡೆದಿದ್ದಾರೆ.