ಮುಂಬೈ, ಜು. 15 (DaijiworldNews/AA): ಸೋಶಿಯಲ್ ಮೀಡಿಯಾದಲ್ಲಿ 'ಲವ್ ಜಿಹಾದ್ನ ಬ್ರ್ಯಾಂಡ್ ಅಂಬಾಸಿಡರ್' ಎಂದು ನಟ ಅಮೀರ್ ಖಾನ್ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಇದೀಗ ತಮ್ಮ ವಿರುದ್ಧದ ಟೀಕೆಗಳಿಗೆ ನಟ ತಿರುಗೇಟು ನೀಡಿದ್ದಾರೆ.

ಅಮೀರ್ ಖಾನ್ ಇತ್ತೀಚೆಗಷ್ಟೇ ತಮ್ಮ ದೀರ್ಘಕಾಲದ ಸ್ನೇಹಿತೆ ಗೌರಿ ಸ್ಪ್ರ್ಯಾಟ್ ಅವರನ್ನು ಮದುವೆಯಾಗಿದ್ದಾರೆ. ಆದರೆ ಅವರ ಮದುವೆಯ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ವ್ಯಕ್ತವಾಗಿತ್ತು. ಈ ಬಗ್ಗೆ ಮಾತನಾಡಿರುವ ಅಮೀರ್ ಖಾನ್, "ತಮ್ಮ ಕುಟುಂಬವು ಯಾವಾಗಲೂ ಅಂತರ್ಧರ್ಮೀಯ ಸಂಬಂಧಗಳನ್ನು ಮುಕ್ತವಾಗಿ ಒಪ್ಪಿಕೊಂಡಿದೆ ಮತ್ತು ತಮ್ಮ ಯಾವುದೇ ಮದುವೆಗಳಲ್ಲೂ ಧರ್ಮ ಬದಲಾವಣೆಯ ಪ್ರಕ್ರಿಯೆ ನಡೆದಿಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ.
"ಸತ್ಯ ಏನೆಂದರೆ ನಮ್ಮದು ಎಲ್ಲರನ್ನೂ ಒಳಗೊಳ್ಳುವ ಅತ್ಯಂತ ವಿಶಾಲ ಮನೋಭಾವದ ಕುಟುಂಬ. ನನ್ನ ಇಬ್ಬರು ಸಹೋದರಿಯರು ಹಿಂದೂಗಳನ್ನು ವಿವಾಹವಾಗಿದ್ದಾರೆ. ನನ್ನ ಮಗಳು ಇರಾ ಖಾನ್ ಕೂಡ ಹಿಂದೂ ಯುವಕನನ್ನು ಮದುವೆಯಾಗಿದ್ದಾಳೆ. ನನ್ನ ಸೋದರ ಸಂಬಂಧಿ ಮನ್ಸೂರ್ ಕ್ರಿಶ್ಚಿಯನ್ ಮಹಿಳೆಯನ್ನು ವರಿಸಿದ್ದಾರೆ. ನಮ್ಮ ಕುಟುಂಬದಲ್ಲಿ ಹಿಂದೂ, ಕ್ರಿಶ್ಚಿಯನ್ ಹೀಗೆ ಎಲ್ಲ ಧರ್ಮದವರೂ ಇದ್ದಾರೆ" ಎಂದು ತಿಳಿಸಿದ್ದಾರೆ.
"ನನ್ನ ಪತ್ನಿಯರಾದ ಗೌರಿ ಆಗಲಿ, ಕಿರಣ್ ರಾವ್ ಆಗಲಿ ಅಥವಾ ರೀನಾ ದತ್ತಾ ಆಗಲಿ ಯಾರೂ ತಮ್ಮ ಧರ್ಮವನ್ನು ಬದಲಾಯಿಸಿಲ್ಲ. ಏಕೆಂದರೆ ನಮ್ಮ ಮದುವೆಗಳೆಲ್ಲವೂ ಕಾನೂನುಬದ್ಧವಾಗಿ ನೋಂದಣಿಯಾದ ಸಿವಿಲ್ ಮ್ಯಾರೇಜ್ ಗಳಾಗಿವೆ. ಇನ್ನು ಈಗಿನ ನನ್ನ ಪತ್ನಿ ಗೌರಿ ಹಿಂದೂ ಕೂಡ ಅಲ್ಲ, ಆಕೆ ಕ್ರಿಶ್ಚಿಯನ್. ಅದೂ ಕೂಡ ಧಾರ್ಮಿಕ ಆಚರಣೆಗಳನ್ನು ಅಷ್ಟಾಗಿ ಪಾಲಿಸದ ಕ್ರಿಶ್ಚಿಯನ್ ಕುಟುಂಬಕ್ಕೆ ಸೇರಿದಾಕೆ" ಎಂದು ಹೇಳಿದ್ದಾರೆ.