ಮುಂಬೈ, ಜು. 13 (DaijiworldNews/AA): 16 ವರ್ಷದ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ ಆರೋಪದ ಮೇರೆಗೆ ಹಿಂದಿ ಕಿರುತೆರೆಯ ಪ್ರಸಿದ್ಧ ನಟ ರೋಹಿತ್ ಚಂದೇಲ್ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ನಟನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಅಪ್ರಾಪ್ತ ಬಾಲಕಿಯನ್ನು ಹಿಂಬಾಲಿಸುವುದು ಮತ್ತು ಹಲ್ಲೆ ನಡೆಸಿದ ಆರೋಪದಡಿ ಪಂತ್ ನಗರ ಪೊಲೀಸರು ನಟನನ್ನು ದಹಿಸರ್ನಲ್ಲಿರುವ ಮನೆಯಿಂದ ಬಂಧಿಸಿದ್ದಾರೆ. ನಂತರ ಅವರನ್ನು ವಿಶೇಷ ಪೋಕ್ಸೋ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರನ್ನು ಪೊಲೀಸ್ ಕಸ್ಟಡಿಗೊಪ್ಪಿಸಿದೆ.
ನಟ ರೋಹಿತ್ ತಮ್ಮ ವೈಯಕ್ತಿಕ ನಂಬರ್ನಿಂದ ಬಾಲಕಿಗೆ ಪದೇ ಪದೇ ಫೋನ್ ಮಾಡುತ್ತಿದ್ದರು. ಬೇರೆ ಬೇರೆ ನಂಬರ್ಗಳಿಂದಲೂ ಕರೆ ಮಾಡಿ ಕಿರುಕುಳ ನೀಡುತ್ತಿದ್ದರು. ಇದರಿಂದ ಬಾಲಕಿ ತೀವ್ರ ಮಾನಸಿಕ ಅಸಮಾಧಾನಕ್ಕೆ ಒಳಗಾಗಿದ್ದಳು. ಜುಲೈ 5 ರಂದು ಮುಂಬೈನ ಉಪನಗರದಲ್ಲಿ ಬಾಲಕಿಯಿದ್ದ ಜಾಗಕ್ಕೆ ನಟ ಬಂದಿದ್ದನು. ಆಕೆಯನ್ನು ಹಿಂಬಾಲಿಸಿ ಗಲಾಟೆ ಮಾಡಿದ್ದನು. ಅಲ್ಲದೆ ಬಾಲಕಿಗೆ ಬೈದು ಕೈಯಿಂದ ಹಲ್ಲೆ ನಡೆಸಿದ್ದನು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪೊಲೀಸ್ ಅಧಿಕಾರಿಗಳು ನಟನನ್ನು ಬಂಧಿಸಿರುವುದಾಗಿ ಖಚಿತಪಡಿಸಿದ್ದಾರೆ. ನಟ ಮತ್ತು ಬಾಲಕಿಗೆ ಈ ಮೊದಲೇ ಪರಿಚಯವಿತ್ತು. ಪ್ರಕರಣದ ತನಿಖೆಯನ್ನು ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರೋಹಿತ್ ಚಂದೇಲ್ ಅವರು ಪಾಂಡ್ಯ ಸ್ಟೋರ್ ಮತ್ತು ಕಾಶಿಬಾಯಿ ಬಾಜೀರಾವ್ ಬಲ್ಲಾಳ್ ಧಾರಾವಾಹಿಗಳ ಮೂಲಕ ಖ್ಯಾತಿ ಗಳಿಸಿದ್ದರು.