ಬೆಂಗಳೂರು, ಜೂ. 29 (DaijiworldNews/AA): ಇತ್ತೀಚೆಗೆ ನಟಿ ಕೃಷಿ ತಾಪಂಡ ಅವರು ವಾಸವಿದ್ದ ಫ್ಲ್ಯಾಟ್ನಲ್ಲೇ ಅವರ ಆಪ್ತ ಗೆಳೆಯ ವೈಶಾಕ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಈ ಬಗ್ಗೆ ನಟಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ.

"ಇಂತಹದ್ದೊಂದು ಬರಹವನ್ನು ಬರೆಯಬೇಕಾಗಿ ಬರುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ನನಗೆ ಈ ಸಮಯದಲ್ಲಿ ಯಾವುದೇ ಸಾರ್ವಜನಿಕ ಹೇಳಿಕೆ ನೀಡುವ ಮಾನಸಿಕ ಶಕ್ತಿ ಇಲ್ಲದಿದ್ದರೂ, ಸುತ್ತಲೂ ಕೇಳಿಬರುತ್ತಿರುವ ನಿರಂತರ ಊಹಾಪೋಹಗಳು ಮತ್ತು ಪ್ರಶ್ನೆಗಳಿಂದಾಗಿ ಈ ಸ್ಪಷ್ಟನೆ ನೀಡುತ್ತಿದ್ದೇನೆ. ನನಗೆ ಅತ್ಯಂತ ಆಪ್ತರಾಗಿದ್ದ, ನನ್ನನ್ನು ರಕ್ಷಿಸುತ್ತಿದ್ದ ವ್ಯಕ್ತಿಯನ್ನು ಕಳೆದುಕೊಂಡ ನೋವಿನಲ್ಲಿ ನಾನಿದ್ದೇನೆ. ಈ ನಷ್ಟದಿಂದ ಹೊರಬರಲು ನನಗೆ ಸಾಧ್ಯವಾಗುತ್ತಿಲ್ಲ" ಎಂದು ಪೋಸ್ಟ್ ಮಾಡಿದ್ದಾರೆ.
"ಅವರ ಕುಟುಂಬ ಮತ್ತು ಆಪ್ತರು ಈ ದೊಡ್ಡ ನಷ್ಟವನ್ನು ಅರಗಿಸಿಕೊಳ್ಳಲು ಹೆಣಗಾಡುತ್ತಿರುವಾಗ, ನಿರಂತರವಾಗಿ ಕಥೆಗಳನ್ನು ಸೃಷ್ಟಿಸಲಾಗುತ್ತಿದೆ. ಕೆಲವು ಮಾಧ್ಯಮಗಳು ಗೌರವಯುತವಾಗಿ ನಡೆದುಕೊಂಡರೆ, ಇನ್ನು ಕೆಲವು ಕೇವಲ ರಿಯಾಕ್ಷನ್ಗಾಗಿ ಒತ್ತಾಯಿಸುತ್ತಿವೆ. ನೀವು ಹೇಗಿದ್ದೀರಾ ಎಂದು ಕೇಳುವ ಬದಲು ನಿಮ್ಮ ರಿಯಾಕ್ಷನ್ ಏನು ಎಂದು ಕೇಳುತ್ತಿದ್ದಾರೆ" ಎಂದಿದ್ದಾರೆ.
"ಇಲ್ಲಿ ಒಂದು ಕುಟುಂಬ ತನ್ನ ಮಗನನ್ನು ಕಳೆದುಕೊಂಡಿದೆ. ಸ್ನೇಹಿತರು ತಮ್ಮ ಆಪ್ತನನ್ನು ಕಳೆದುಕೊಂಡಿದ್ದಾರೆ. ಪ್ರತಿಯೊಂದು ಅನಗತ್ಯ ಪ್ರಶ್ನೆ, ಊಹೆ ಮತ್ತು ವದಂತಿಗಳು ಇಲ್ಲಿ ಉಳಿದು ನೋವು ಅನುಭವಿಸುತ್ತಿರುವವರ ಮೇಲೆ ತೀವ್ರ ಪರಿಣಾಮ ಬೀರುತ್ತವೆ. ನಮಗೆ ಶಾಂತಿಯಿಂದ ದುಃಖಿಸಲು ಬಿಡಿ" ಎಂದು ಮನವಿ ಮಾಡಿಕೊಂಡಿದ್ದಾರೆ.
"ಸದ್ಯಕ್ಕೆ ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ಉತ್ತರಿಸುವ ಶಕ್ತಿ ನನಗಿಲ್ಲ. ಆದರೆ ನಿಮ್ಮ ಪ್ರೀತಿ ಮತ್ತು ಕಾಳಜಿಗೆ ನಾನು ಚಿರಋಣಿ. ಯಾರಿಗಾದರೂ ಬದುಕಲು ಕಾರಣ ನೀಡಲು ಸಾಧ್ಯವಾಗದಿದ್ದರೆ, ಕನಿಷ್ಠ ಅವರು ಭರವಸೆ ಕಳೆದುಕೊಳ್ಳುವಂತೆ ಮಾಡಬೇಡಿ. ದಯವಿಟ್ಟು ಎಲ್ಲರೂ ದಯೆ ಮತ್ತು ಕರುಣೆಯನ್ನು ಆಯ್ಕೆ ಮಾಡಿಕೊಳ್ಳಿ. ದಯವಿಟ್ಟು ಇದನ್ನು ಇಷ್ಟಕ್ಕೇ ನಿಲ್ಲಿಸಿ" ಎಂದು ಕೇಳಿಕೊಂಡಿದ್ದಾರೆ.