ಬೆಂಗಳೂರು, ಜೂ. 28 (DaijiworldNews/TA): ಕನ್ನಡ ಚಿತ್ರರಂಗದ ಖ್ಯಾತ ನಟಿ ಶರ್ಮಿಳಾ ಮಾಂಡ್ರೆ ನಿರ್ಮಾಪಕ ಸುಧನ್ ಸುಂದರಂ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಖಾಸಗಿ ಸ್ಟಾರ್ ಹೋಟೆಲ್ನಲ್ಲಿ ನಡೆದ ಸರಳ ಹಾಗೂ ಆಪ್ತ ಸಮಾರಂಭದಲ್ಲಿ ಕುಟುಂಬದವರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿಕೊಂಡಿದ್ದಾರೆ.

ನಿಶ್ಚಿತಾರ್ಥದ ಸಂತಸದ ಕ್ಷಣಗಳ ಫೋಟೋಗಳನ್ನು ಶರ್ಮಿಳಾ ಮಾಂಡ್ರೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಸುಧನ್ ಸುಂದರಂ ತಮಿಳು ಚಿತ್ರರಂಗದ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದು, ಹಲವು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಇದೀಗ ಈ ಜೋಡಿ ವೈವಾಹಿಕ ಜೀವನದತ್ತ ಹೆಜ್ಜೆಯಿಡಲು ಸಜ್ಜಾಗಿದೆ.
ಕೆಲವೇ ದಿನಗಳ ಹಿಂದೆ ತಮ್ಮ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗಲಿರುವುದಾಗಿ ಶರ್ಮಿಳಾ ಸುಳಿವು ನೀಡಿದ್ದರು. ಇದೀಗ ನಿಶ್ಚಿತಾರ್ಥದ ಮೂಲಕ ಆ ಸುದ್ದಿಗೆ ಅಧಿಕೃತ ಮುದ್ರೆ ಬಿದ್ದಿದೆ. ಮದುವೆಯ ದಿನಾಂಕ ಹಾಗೂ ಸ್ಥಳವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಆದರೆ ಅದ್ದೂರಿ ಡೆಸ್ಟಿನೇಷನ್ ವೆಡ್ಡಿಂಗ್ ಆಯೋಜನೆಗೆ ಸಿದ್ಧತೆಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ. ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಈ ಜೋಡಿಗೆ ಶುಭ ಹಾರೈಸುತ್ತಿದ್ದಾರೆ.