ಉಡುಪಿ, ಜೂ. 26 (DaijiworldNews/TA): ಕನ್ನಡದ ಕಿರುಚಿತ್ರ ‘ದಿ ಹಗ್ ಆಫ್ ಎಂಪಿನೆಸ್’ (ಖಾಲಿತನದ ಅಪ್ಪುಗೆ) ಮುಂಬೈನಲ್ಲಿ ನಡೆದ 19ನೇ ಮುಂಬೈ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿ ಪ್ರಶಸ್ತಿ ಗೆದ್ದು ರಾಜ್ಯಕ್ಕೆ ಹೆಮ್ಮೆ ತಂದಿದೆ.

ಚಿತ್ರದ ನಿರ್ದೇಶಕ ಡಾ. ಪ್ರದೀಪ್ ಕೆಂಚನೂರು ಅವರಿಗೆ ಪ್ರೀ ಪ್ರೆಸ್ತಿ ಅಂತರರಾಷ್ಟ್ರೀಯ ಕ್ರಿಟಿಕ್ ಅಸೋಸಿಯೇಷನ್ ವತಿಯಿಂದ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಭಾರತೀಯ ಫಿಲ್ಮ್ ಸೊಸೈಟಿಗಳ ಒಕ್ಕೂಟದ ಉಪಾಧ್ಯಕ್ಷ ಪ್ರೇಮೇಂದ್ರ ಮಜುಂದಾರ್ ಪ್ರಶಸ್ತಿ ನೀಡಿ ಗೌರವಿಸಿದರು. ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಪ್ರದೀಪ್ ಕೆಂಚನೂರು ಅವರಿಗೆ ಇದು ನಿರ್ದೇಶಕರಾಗಿ ಮೊದಲ ಚಿತ್ರವಾಗಿದೆ. ಮೊದಲ ಪ್ರಯತ್ನದಲ್ಲೇ ಅಂತಾರಾಷ್ಟ್ರೀಯ ಮಟ್ಟದ ಚಿತ್ರೋತ್ಸವದಲ್ಲಿ ಪ್ರಶಸ್ತಿ ಗಳಿಸಿರುವುದು ವಿಶೇಷವಾಗಿದೆ.
ರಾಷ್ಟ್ರೀಯ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಎನ್ಎಫ್ಡಿಸಿ ಸಂಯುಕ್ತವಾಗಿ ಆಯೋಜಿಸಿದ್ದ ಈ ಪ್ರತಿಷ್ಠಿತ ಚಿತ್ರೋತ್ಸವದಲ್ಲಿ 48 ರಾಷ್ಟ್ರಗಳಿಂದ 903 ಚಿತ್ರಗಳು ಸ್ಪರ್ಧಿಸಿದ್ದವು. ಇಂತಹ ಕಠಿಣ ಸ್ಪರ್ಧೆಯ ನಡುವೆ ಕನ್ನಡದ ಕಿರುಚಿತ್ರ ಪ್ರಶಸ್ತಿ ಗೆದ್ದಿರುವುದು ಗಮನಾರ್ಹ ಸಾಧನೆಯಾಗಿದೆ. ಡಾ. ಪ್ರದೀಪ್ ಕೆಂಚನೂರು ಅವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೆಂಚನೂರು ಗ್ರಾಮದ ಬಗ್ವಾಡಿ ನಿವಾಸಿಯಾಗಿದ್ದು, ಅವರ ಈ ಸಾಧನೆಗೆ ಚಿತ್ರರಂಗದ ಗಣ್ಯರು, ಸ್ನೇಹಿತರು ಹಾಗೂ ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.