ಹೈದರಾಬಾದ್, ಜೂ. 25 (DaijiworldNews/TA): ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳು ಮತ್ತು ಚಿತ್ರರಂಗದಲ್ಲಿ ಹರಿದಾಡುತ್ತಿದ್ದ ಗರ್ಭಧಾರಣೆಯ ಊಹಾಪೋಹಗಳಿಗೆ ತೆರೆ ಎಳೆದಿರುವ ನಟಿ ಸಮಂತಾ, ತಾವು ತಾಯಿಯಾಗುತ್ತಿರುವ ವಿಚಾರವನ್ನು ಅಧಿಕೃತವಾಗಿ ಬಹಿರಂಗಪಡಿಸಿದ್ದಾರೆ. ಇದರೊಂದಿಗೆ ಸ್ವಲ್ಪ ಸಮಯದವರೆಗೆ ಚಿತ್ರರಂಗದಿಂದ ವಿರಾಮ ಪಡೆಯಲಿರುವುದಾಗಿಯೂ ಅವರು ತಿಳಿಸಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ಮಾ ಇಂಟಿ ಬಂಗಾರಂ’ ಚಿತ್ರದ ಸಕ್ಸಸ್ ಮೀಟ್ ಕಾರ್ಯಕ್ರಮ ಜೂನ್ 24ರಂದು ಹೈದರಾಬಾದ್ನಲ್ಲಿ ನಡೆಯಿತು. ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಮಂತಾ, ತಮ್ಮ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ವರದಿಗಾರರೊಬ್ಬರು, “ಇಷ್ಟೊಂದು ದೊಡ್ಡ ಯಶಸ್ಸಿನ ಬಳಿಕ ನೀವು ನಿರಂತರವಾಗಿ ಸಿನಿಮಾಗಳಲ್ಲಿ ನಟಿಸಲು ಯೋಜಿಸಿದ್ದೀರಾ?” ಎಂದು ಪ್ರಶ್ನಿಸಿದಾಗ, ಸಮಂತಾ ನಗುತ್ತಾ, “ನಾನು ಸ್ವಲ್ಪ ಸಮಯದವರೆಗೆ ವಿರಾಮ ತೆಗೆದುಕೊಳ್ಳಬೇಕಾಗುತ್ತದೆ. ನಾನು ಮೆಟರ್ನಿಟಿ ಲೀವ್ಗೆ ಹೋಗುತ್ತಿದ್ದೇನೆ” ಎಂದು ಉತ್ತರಿಸಿದರು. ಈ ಹೇಳಿಕೆಯೊಂದಿಗೆ ಅವರ ಗರ್ಭಧಾರಣೆ ಕುರಿತ ಸುದ್ದಿಗೆ ಅಧಿಕೃತ ಮುದ್ರೆ ಬಿದ್ದಂತಾಯಿತು.
ಕಳೆದ ಕೆಲವು ವಾರಗಳಿಂದ ಸಮಂತಾ ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದವು. ‘ಮಾ ಇಂಟಿ ಬಂಗಾರಂ’ ಚಿತ್ರದ ಪ್ರಚಾರ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಸೀರೆಯಲ್ಲಿ ಕಾಣಿಸಿಕೊಂಡಿದ್ದ ಸಮಂತಾ, ಸಕ್ಸಸ್ ಮೀಟ್ನಲ್ಲಿ ಟಿ-ಶರ್ಟ್ ಮತ್ತು ಜೀನ್ಸ್ ಧರಿಸಿ ಭಾಗವಹಿಸಿದ್ದರು. ಈ ವೇಳೆ ಅವರ ಬೇಬಿ ಬಂಪ್ ಸ್ಪಷ್ಟವಾಗಿ ಕಾಣಿಸಿಕೊಂಡಿರುವ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿತ್ತು. ಆದರೆ ಆ ಸಮಯದಲ್ಲಿ ಸಮಂತಾ ಅಥವಾ ಅವರ ಪತಿ ರಾಜ್ ನಿಧಿಮೋರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
ಚಿತ್ರತಂಡ ಇತ್ತೀಚೆಗೆ ಮೆಗಾಸ್ಟಾರ್ ಚಿರಂಜೀವಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ, ಸಮಂತಾ ಮತ್ತು ರಾಜ್ ನಿಧಿಮೋರು ದಂಪತಿಗೆ “ಹೊಸ ಅಧ್ಯಾಯದ ಆರಂಭ”ಕ್ಕಾಗಿ ಅಭಿನಂದನೆ ಸಲ್ಲಿಸಿದ್ದರು. ಈ ಘಟನೆ ಗರ್ಭಧಾರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ ತುಂಬಿತ್ತು. ಈಗ ಸ್ವತಃ ಸಮಂತಾ ಈ ವಿಚಾರವನ್ನು ಬಹಿರಂಗಪಡಿಸಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ಇದೇ ವೇಳೆ ‘ಮಾ ಇಂಟಿ ಬಂಗಾರಂ’ಚಿತ್ರ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದೆ. ಈಗಾಗಲೇ 50 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿರುವ ಚಿತ್ರವು ವಿದೇಶಗಳಲ್ಲಿಯೂ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದ್ದು, 2 ಮಿಲಿಯನ್ ಡಾಲರ್ ಗಳಿಕೆಯತ್ತ ದಾಪುಗಾಲಿಡುತ್ತಿದೆ.
ನಂದಿನಿ ರೆಡ್ಡಿ ನಿರ್ದೇಶನದ ಈ ಕೌಟುಂಬಿಕ ಆಕ್ಷನ್ ಎಂಟರ್ಟೈನರ್ನಲ್ಲಿ ಸಮಂತಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ದಿಗಂತ್, ಗುಲ್ಶನ್ ದೇವಯ್ಯ, ಶ್ರೀಮುಖಿ, ಗೌತಮಿ, ಆನಂದ್, ಲಕ್ಷ್ಮಿ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಚಿತ್ರದ ಸಂಗೀತವನ್ನು ಸಂತೋಷ್ ನಾರಾಯಣನ್ ಸಂಯೋಜಿಸಿದ್ದಾರೆ.
2021ರ ಅಕ್ಟೋಬರ್ನಲ್ಲಿ ನಾಗ ಚೈತನ್ಯ ಅವರೊಂದಿಗೆ ವಿಚ್ಛೇದನ ಪಡೆದ ಬಳಿಕ, ಸಮಂತಾ 2025ರ ಡಿಸೆಂಬರ್ 1ರಂದು ನಿರ್ದೇಶಕ ರಾಜ್ ನಿಧಿಮೋರು ಅವರನ್ನು ವಿವಾಹವಾಗಿದ್ದರು. ಕೊಯಮತ್ತೂರಿನ ಲಿಂಗ ಭೈರವಿ ದೇವಸ್ಥಾನದಲ್ಲಿ ನಡೆದ ಈ ವಿವಾಹವು ಸಾಕಷ್ಟು ಸುದ್ದಿಯಾಗಿತ್ತು. ಈಗ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸಮಂತಾ, ವೈಯಕ್ತಿಕ ಜೀವನದ ಈ ಹೊಸ ಅಧ್ಯಾಯವನ್ನು ಸಂಭ್ರಮದಿಂದ ಸ್ವಾಗತಿಸುತ್ತಿದ್ದಾರೆ.