ನವದೆಹಲಿ, ಜೂ. 11 (DaijiworldNews/TA): ವಿಶ್ವ ಸಿನಿರಂಗದಲ್ಲಿ ಪ್ರತಿವರ್ಷ ನೂರಾರು ಸಿನಿಮಾಗಳು ಬಿಡುಗಡೆಯಾಗುತ್ತವೆ. ಆದರೆ ಕೆಲವೇ ಕೆಲವು ಚಿತ್ರಗಳು ಮಾತ್ರ ತಮ್ಮ ವಿಶಿಷ್ಟ ಕಥಾಹಂದರ, ನಿರೂಪಣೆ ಮತ್ತು ಪ್ರೇಕ್ಷಕರ ಮೇಲೆ ಬೀರುವ ಪರಿಣಾಮದಿಂದ ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಅಂತಹ ಚಿತ್ರಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವುದು ‘ಒಬ್ಸೆಷನ್’. ಸೂಪರ್ನ್ಯಾಚುರಲ್ ಸೈಕಲಾಜಿಕಲ್ ಹಾರರ್ ಕಥೆಯನ್ನು ಒಳಗೊಂಡಿರುವ ಈ ಸಿನಿಮಾ ಪ್ರೇಕ್ಷಕರನ್ನು ಬೆಚ್ಚಿಬೀಳಿಸುವುದರ ಜೊತೆಗೆ ಬಾಕ್ಸ್ ಆಫೀಸ್ನಲ್ಲೂ ಭರ್ಜರಿ ಯಶಸ್ಸು ಸಾಧಿಸಿದೆ.

ದೊಡ್ಡ ಬಜೆಟ್, ಸ್ಟಾರ್ ನಟರ ಪಡೆ ಅಥವಾ ಭಾರೀ ಪ್ರಚಾರವಿಲ್ಲದೆ ಕೇವಲ ಕಥೆ ಮತ್ತು ನಿರೂಪಣೆಯ ಶಕ್ತಿಯಿಂದ ವಿಶ್ವದ ಗಮನ ಸೆಳೆದಿರುವ ಈ ಚಿತ್ರ, ಹಾಲಿವುಡ್ನಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ‘ಒಬ್ಸೆಷನ್’ ಚಿತ್ರದ ಯಶಸ್ಸಿನೊಂದಿಗೆ ಯುವ ನಿರ್ದೇಶಕ ಕರಿ ಬಾರ್ಕರ್ ಹಾಲಿವುಡ್ನಲ್ಲಿ ಹೊಸ ಭರವಸೆಯ ತಾರೆಯಾಗಿ ಹೊರಹೊಮ್ಮಿದ್ದಾರೆ. ಕೇವಲ 26ನೇ ವಯಸ್ಸಿನಲ್ಲೇ ಅವರು ಜಾಗತಿಕ ಮಟ್ಟದಲ್ಲಿ ಸಿನಿಪ್ರೇಮಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಒಂದು ಕಾಲದಲ್ಲಿ ಯೂಟ್ಯೂಬ್ನಲ್ಲಿ ಹಾರರ್ ವಿಡಿಯೋಗಳನ್ನು ನಿರ್ಮಿಸುತ್ತಿದ್ದ ಯುವಕನಾಗಿದ್ದ ಬಾರ್ಕರ್, ಇಂದು ಹಾಲಿವುಡ್ನ ಭವಿಷ್ಯದ ಪ್ರತಿಭಾವಂತ ನಿರ್ದೇಶಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಯೂಟ್ಯೂಬ್ನಿಂದ ಆರಂಭವಾದ ಸಿನಿ ಪಯಣ : ಕರಿ ಬಾರ್ಕರ್ ತಮ್ಮ ಸ್ನೇಹಿತ ಕೂಪರ್ ಟಾಮ್ಲಿನ್ಸನ್ ಅವರೊಂದಿಗೆ ಸೇರಿ ‘That's A Bad Idea’ ಎಂಬ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದರು. ಈ ಚಾನೆಲ್ನಲ್ಲಿ ಹಾರರ್ ವಿಡಿಯೋಗಳು, ಕಿರುಚಿತ್ರಗಳು ಮತ್ತು ವಿಭಿನ್ನ ಕಥಾಹಂದರದ ಕಂಟೆಂಟ್ಗಳನ್ನು ಪ್ರಕಟಿಸುತ್ತಿದ್ದರು.
ಯೂಟ್ಯೂಬ್ ಮೂಲಕವೇ ನಿರ್ದೇಶನ, ಕಥೆ ಬರವಣಿಗೆ ಹಾಗೂ ಸಿನಿಮಾ ನಿರ್ಮಾಣದ ತಂತ್ರಗಳನ್ನು ಸ್ವತಃ ಕಲಿತ ಬಾರ್ಕರ್, ತಮ್ಮದೇ ಶೈಲಿಯನ್ನು ರೂಪಿಸಿಕೊಂಡರು. ಇದೇ ಅನುಭವ ಅವರ ಸಿನಿ ಜೀವನಕ್ಕೆ ಗಟ್ಟಿಯಾದ ಅಡಿಪಾಯವಾಯಿತು.
‘ಮಿಲ್ಕ್ ಅಂಡ್ ಸೀರಿಯಲ್’ ಚಿತ್ರದಿಂದ ಸಿಕ್ಕ ದೊಡ್ಡ ಬ್ರೇಕ್ : 2024ರಲ್ಲಿ ಬಿಡುಗಡೆಯಾದ Milk & Serial ಸಿನಿಮಾ ಕರಿ ಬಾರ್ಕರ್ ಅವರ ವೃತ್ತಿಜೀವನದಲ್ಲಿ ಮಹತ್ವದ ತಿರುವು ನೀಡಿತು. ಕಡಿಮೆ ವೆಚ್ಚದಲ್ಲಿ ನಿರ್ಮಾಣವಾದ ಈ ಹಾರರ್ ಚಿತ್ರವನ್ನು ಯೂಟ್ಯೂಬ್ನಲ್ಲಿ ಉಚಿತವಾಗಿ ಬಿಡುಗಡೆ ಮಾಡಲಾಗಿತ್ತು.
ಚಿತ್ರದ ಯಶಸ್ಸಿನ ನಂತರ ಹಾಲಿವುಡ್ನ ಪ್ರಮುಖ ನಿರ್ಮಾಣ ಸಂಸ್ಥೆಗಳು ಅವರ ಪ್ರತಿಭೆಯತ್ತ ಗಮನ ಹರಿಸಲು ಆರಂಭಿಸಿದವು. ಅದರ ಫಲವಾಗಿಯೇ ಮೂಡಿಬಂದ ಸಿನಿಮಾ ‘ಒಬ್ಸೆಷನ್’, ಇಂದು ಜಾಗತಿಕ ಮಟ್ಟದಲ್ಲಿ ದೊಡ್ಡ ಯಶಸ್ಸು ಕಾಣುತ್ತಿದೆ.
‘ಒಬ್ಸೆಷನ್’ ಸಿನಿಮಾ ಕೇವಲ ವಿಮರ್ಶಕರ ಮೆಚ್ಚುಗೆಗೆ ಮಾತ್ರ ಸೀಮಿತವಾಗಿಲ್ಲ. ಆರ್ಥಿಕವಾಗಿಯೂ ಚಿತ್ರ ಭರ್ಜರಿ ಸಾಧನೆ ಮಾಡಿದೆ. ಅಮೆರಿಕ ಮಾರುಕಟ್ಟೆಯಲ್ಲಿ 152.1 ಮಿಲಿಯನ್ ಡಾಲರ್ಗೂ ಅಧಿಕ ಗಳಿಕೆ ದಾಖಲಿಸಿರುವ ಈ ಚಿತ್ರ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದೆ.
ಸುಮಾರು 57 ದೇಶಗಳ 6,825ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ಈ ಸಿನಿಮಾ ವಿದೇಶಗಳಲ್ಲೂ ಭಾರೀ ಆದಾಯ ಗಳಿಸಿದ್ದು, ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆಗಳತ್ತ ಮುನ್ನುಗ್ಗುತ್ತಿದೆ. ಕಡಿಮೆ ಬಜೆಟ್ನಲ್ಲಿ ನಿರ್ಮಾಣವಾದ ಸಿನಿಮಾವೊಂದು ವಿಶ್ವದಾದ್ಯಂತ ಇಷ್ಟು ದೊಡ್ಡ ಮಟ್ಟದ ಯಶಸ್ಸು ಸಾಧಿಸಿರುವುದು ಹಾಲಿವುಡ್ ವಲಯದಲ್ಲೇ ಅಚ್ಚರಿಗೆ ಕಾರಣವಾಗಿದೆ.