ಬೆಂಗಳೂರು, ಜೂ. 06 (DaijiworldNews/TA): ಸ್ಯಾಂಡಲ್ವುಡ್ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ವಿಶೇಷ ಸಂದರ್ಭದಲ್ಲಿ ಆತ್ಮೀಯ ಗೆಳೆಯ ಹಾಗೂ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನೀಡಿದ ಶುಭಾಶಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಕಳೆದ ಕೆಲವು ದಿನಗಳಿಂದ ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ನಡುವೆ ಮನಸ್ತಾಪ ಉಂಟಾಗಿದೆ ಎಂಬ ವದಂತಿಗಳು ಹರಿದಾಡುತ್ತಿದ್ದವು. ಆದರೆ ರಕ್ಷಿತ್ ಅವರ ಹುಟ್ಟುಹಬ್ಬದ ದಿನವೇ ರಿಷಬ್ ಹಂಚಿಕೊಂಡಿರುವ ಪೋಸ್ಟ್ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದೆ. ರಿಷಬ್ ಶೆಟ್ಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ‘ಕಿರಿಕ್ ಪಾರ್ಟಿ’ ಚಿತ್ರದ ಚಿತ್ರೀಕರಣದ ಸಂದರ್ಭದ ಹಳೆಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಇಬ್ಬರೂ ಮುಗುಳ್ನಗುತ್ತಾ ಕಾಣಿಸಿಕೊಂಡಿದ್ದು, ಅವರ ಸ್ನೇಹದ ಆಳವನ್ನು ಮತ್ತೊಮ್ಮೆ ನೆನಪಿಸಿದೆ.
“ಬಂದು ಹೋಗುವ ಜನರ ಮಧ್ಯೆ ಈ ಗೆಳೆಯ ಶಾಶ್ವತ ಅಧ್ಯಾಯ. ಹ್ಯಾಪಿ ಬರ್ತ್ಡೇ ಮಗ ರಕ್ಷಿತ್ ಶೆಟ್ಟಿ” ಎಂದು ರಿಷಬ್ ಬರೆದುಕೊಂಡಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ರಕ್ಷಿತ್ ಶೆಟ್ಟಿ ಅವರ ಮುಂದಿನ ಸಿನಿಮಾದ ಘೋಷಣೆಯಾಗಿ ಸಾಕಷ್ಟು ಸಮಯ ಕಳೆದಿದ್ದರೂ, ಹೊಸ ಅಪ್ಡೇಟ್ ಸಿಕ್ಕಿರಲಿಲ್ಲ. ಈ ಕುರಿತು ಅಭಿಮಾನಿಗಳು ನಿರಂತರವಾಗಿ ಪ್ರಶ್ನಿಸುತ್ತಿದ್ದರು. ಈ ಪ್ರಶ್ನೆಗಳಿಗೆ ಉತ್ತರ ನೀಡಿರುವ ರಿಷಬ್ ಶೆಟ್ಟಿ, “ಮೊನ್ನೆ ತಾನೇ ಭೇಟಿ ಮಾಡಿ ಬಂದೆ. ಅವನು ಸದ್ಯದಲ್ಲೇ ಮರಳಿ ಬರಲಿದ್ದಾನೆ” ಎಂದು ಬರೆದುಕೊಂಡಿದ್ದಾರೆ.
ರಿಷಬ್ ಅವರ ಈ ಮಾತುಗಳು ರಕ್ಷಿತ್ ಶೆಟ್ಟಿ ಅಭಿಮಾನಿಗಳಲ್ಲಿ ಹೊಸ ಉತ್ಸಾಹ ಮೂಡಿಸಿದ್ದು, ಅವರ ಮುಂದಿನ ಸಿನಿಮಾದ ಬಗ್ಗೆ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿವೆ. ರಿಷಬ್ ಶೆಟ್ಟಿ ಹಂಚಿಕೊಂಡಿರುವ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗುತ್ತಿದ್ದು, ಇಬ್ಬರ ಸ್ನೇಹದ ಬಾಂಧವ್ಯಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಇವರಿಬ್ಬರ ನಡುವೆ ಮನಸ್ತಾಪವಿದೆ ಎಂಬ ವದಂತಿಗಳಿಗೆ ಈ ಪೋಸ್ಟ್ ಸೂಕ್ತ ಉತ್ತರ ನೀಡಿದೆ ಎಂದು ಸಿನಿಪ್ರೇಮಿಗಳು ಅಭಿಪ್ರಾಯಪಟ್ಟಿದ್ದಾರೆ.