ಬೆಂಗಳೂರು, ಜೂ. 05 (DaijiworldNews/AA): ಕರ್ನಾಟಕದಲ್ಲಿ ಜನ ನಾಯಗನ್ ಸಿನಿಮಾ ಬಿಡುಗಡೆಗೆ ವಿರೋಧ ವ್ಯಕ್ತಪಡಿಸುತ್ತಿದ್ದು, ಬಿಡುಗಡೆಗೆ ತಡೆಯುತ್ತೇವೆ ಎಂದು ಕನ್ನಡಪರ ಸಂಘಟನೆಗಳ ಮುಖಂಡ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

ಸುದ್ದಿಗಾರೊಂದಿಗೆ ಮಾತನಾಡಿದ ಅವರು, "ಈಗಿನ ತಮಿಳುನಾಡು ಮುಖ್ಯಮಂತ್ರಿ ವಿಜಯ್, ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅವರು ನಟರಾಗಿದ್ದವರು ಈಗ ಅಧಿಕಾರಕ್ಕೆ ಬಂದಿದ್ದಾರೆ. ನಟನೆ ಮಾಡುವುದು ಸುಲಭ ಆದರೆ ಅಧಿಕಾರ ನಡೆಸುವುದು ಕಷ್ಟ. ಮೇಕೆದಾಟಿಗೆ ವಿರೋಧ ಮಾಡಿದರೆ ಕರ್ನಾಟಕದಲ್ಲಿ ಅವರ ಯಾವುದೇ ಸಿನಿಮಾ ಬಿಡುಗಡೆಗೆ ಅವಕಾಶ ಕೊಡಲ್ಲ" ಎಂದು ಹೇಳಿದ್ದಾರೆ.
"ಈಗಾಗಲೇ ಕಮಲ್ ಹಾಸನ್ ಅವರ ಸಿನಿಮಾವನ್ನು ರಾಜ್ಯದಲ್ಲಿ ಬಿಡುಗಡೆ ಆಗದಂತೆ ತಡೆಯಲು ಯಶಸ್ವಿ ಆಗಿದ್ದೇವೆ. ಕಮಲ್ ಹಾಸನ್, ಕನ್ನಡದ ಬಗ್ಗೆ ನಿಕೃಷ್ಟವಾಗಿ ಮಾತನಾಡಿದ್ದನ್ನು ವಿರೋಧಿಸಿ ಅವರಿಗೆ ಬುದ್ಧೀ ಕಲಿಸಿದ್ದೇವೆ. ಅದೇ ರೀತಿ, ಮೇಕೆದಾಟಿಗೆ ವಿರೋಧ ಮಾಡುತ್ತಿರುವ ತಮಿಳುನಾಡು ಸಿಎಂ ಅವರಿಗೂ ನಾವು ಬುದ್ಧಿ ಕಲಿಸುತ್ತೇವೆ" ಎಂದಿದ್ದಾರೆ.