ಬೆಂಗಳೂರು,ಜೂ. 04 (DaijiworldNews/AK): ಕನ್ನಡ ಚಿತ್ರರಂಗದ ಖ್ಯಾತ ನಟಿ ಶುಭಾ ಪೂಂಜಾ ಅವರ ವೈವಾಹಿಕ ಜೀವನದಲ್ಲಿ ಮದುವೆಯಾದ ನಾಲ್ಕೇ ವರ್ಷಕ್ಕೆ ಬಿರುಕು ಮೂಡಿದೆ.

ಶುಭಾ ಪೂಂಜಾ ಹಾಗೂ ಅವರ ಪತಿ ಸುಮಂತ್ ಬಿಲ್ಲವ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಕೋರಿ ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಕನ್ನಡದ ‘ಮೊಗ್ಗಿನ ಮನಸು’ ಸೇರಿದಂತೆ ಹಲವು ಸಿನಿಮಾಗಳ ಮೂಲಕ ಜನಪ್ರಿಯತೆ ಗಳಿಸಿದ್ದ ಶುಭಾ ಪೂಂಜಾ, ಉದ್ಯಮಿ ಸುಮಂತ್ ಬಿಲ್ಲವ ಅವರನ್ನು ಪ್ರೀತಿಸಿ 2022ರ ಜನವರಿಯಲ್ಲಿ ಮದುವೆಯಾಗಿದ್ದರು. ಮದುವೆಯಾದ ಬಳಿಕ ಈ ದಂಪತಿ ಅತ್ಯಂತ ಖುಷಿ ಖುಷಿಯಾಗಿಯೇ ಕಾಲ ಕಳೆದಿದ್ದರು. ಆದರೆ, ಈಗ ಏಕಾಏಕಿ ಬೇರೆ ಆಗಲು ಮುಂದಾಗಿರೋದು ಅಭಿಮಾನಿಗಳಿಗೆ ಶಾಕಿಂಗ್ ಎನಿಸಿದೆ.
ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ನೀಡುವಂತೆ ಕೋರಿ ಈ ದಂಪತಿ ನ್ಯಾಯಾಲಯಕ್ಕೆ ಜಂಟಿ ಅರ್ಜಿ ಸಲ್ಲಿಸಿದ್ದಾರೆ. ಸದ್ಯ ಅರ್ಜಿ ಸಲ್ಲಿಕೆಯಾಗಿದ್ದು, ಮುಂದಿನ ವಿಚಾರಣೆಯ ವೇಳೆ ಶುಭಾ ಪೂಂಜಾ ಮತ್ತು ಸುಮಂತ್ ಇಬ್ಬರೂ ಕೋರ್ಟ್ಗೆ ಹಾಜರಾಗುವ ಸಾಧ್ಯತೆ ಇದೆ. ಆದರೆ, ಇಬ್ಬರ ನಡುವಿನ ವಿಚ್ಛೇದನಕ್ಕೆ ನಿಖರವಾದ ಕಾರಣವೇನು ಎಂಬುದನ್ನು ಬಹಿರಂಗವಾಗಿಲ್ಲ.
ಈಗಾಗಲೇ ಶುಭಾ ಅವರು ಸೋಶಿಯಲ್ ಮೀಡಿಯಾದಿಂದ ಪತಿ ಜೊತೆಗಿನ ಫೋಟೋ ಡಿಲೀಟ್ ಮಾಡಿದ್ದಾರೆ. ದಾಂಪತ್ಯ ಜೀವನದಲ್ಲಿ ಎದ್ದಿರುವ ಬಿರುಕು ಅವರ ಅಭಿಮಾನಿಗಳಿಗೆ ತೀವ್ರ ನಿರಾಶೆ ಮೂಡಿಸಿದೆ.