ಬೆಂಗಳೂರು, ಜೂ. 02 (DaijiworldNews/AA): ಸ್ಯಾಂಡಲ್ವುಡ್ನ ಖ್ಯಾತ ನಟಿ ರುಕ್ಮಿಣಿ ವಸಂತ್ ಅವರ ನಕಲಿ ಬಿಕಿನಿ ವಿಡಿಯೋ ಮತ್ತು ಫೋಟೋಗಳ ವೈರಲ್ ಸಂಬಂಧ ಬೆಂಗಳೂರಿನ ಸೈಬರ್ ಕ್ರೈಮ್ ಪೊಲೀಸರು 29 ಸಾಮಾಜಿಕ ಖಾತೆಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ಎಐ ಹಾಗೂ ಡೀಪ್ಫೇಕ್ ತಂತ್ರಜ್ಞಾನವನ್ನು ಬಳಸಿ, ಬೇರೆಯೊಬ್ಬರ ದೇಹಕ್ಕೆ ತಮ್ಮ ಮುಖವನ್ನು ಜೋಡಿಸಿ ನಕಲಿ ದೃಶ್ಯಗಳನ್ನು ಸೃಷ್ಟಿಸಲಾಗಿದೆ. ಈ ಕೃತ್ಯದಿಂದ ತಮಗೆ ತೀವ್ರ ಮುಜುಗರವಾಗಿದ್ದು, ತಮ್ಮ ಚಾರಿತ್ರ್ಯ ಹರಣ ಮಾಡಲು ಯತ್ನಿಸಲಾಗಿದೆ ಎಂದು ಅವರು ದೂರು ನೀಡಿದ್ದರು. ಈ ದೂರು ಆಧರಿಸಿ ಎಫ್ಐಆರ್ ದಾಖಲಿಸಲಾಗಿದೆ.
ರುಕ್ಮಿಣಿ ವಸಂತ್ ನೀಡಿದ ದೂರಿನನ್ವಯ ಪೊಲೀಸರು ಒಟ್ಟು 29 ಸೋಶಿಯಲ್ ಮೀಡಿಯಾ ಅಕೌಂಟ್ಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಇದರಲ್ಲಿ 9 ಇನ್ಸ್ಟಾಗ್ರಾಮ್ ಅಕೌಂಟ್ಗಳು, 14 ಟ್ವಿಟರ್ ಅಕೌಂಟ್ಗಳು ಹಾಗೂ 6 ಫೇಸ್ಬುಕ್ ಪೇಜ್ಗಳು ಸೇರಿವೆ. ಸೈಬರ್ ಪೊಲೀಸರು ಐಟಿ ಆ್ಯಕ್ಟ್ 66C, 66D ಹಾಗೂ ಬಿಎನ್ಎಸ್ ಸೆಕ್ಷನ್ 75(3), 79, 336, 356, 351, 352 ಮತ್ತು 294ರ ಅಡಿಯಲ್ಲಿ ಪೊಲೀಸರು ಮೊಕದ್ದಮೆ ಹೂಡಿ ತನಿಖೆ ಆರಂಭಿಸಿದ್ದಾರೆ.