ಮುಂಬೈ, ಮೇ. 27 (DaijiworldNews/AA): ರಣವೀರ್ ಸಿಂಗ್ ಬ್ಯಾನ್ ಆಗಿಲ್ಲ, ನಾನ್-ಕೋಆಪರೇಷನ್ ಮಾತ್ರ ಎಂದು ಪಶ್ಚಿಮ ಭಾರತ ಚಲನಚಿತ್ರ ನೌಕರರ ಒಕ್ಕೂಟ(ಎಫ್ಡಬ್ಲುಐಸಿಇ)ದ ಮುಖ್ಯ ಸಲಹೆಗಾರ ಅಶೋಕ್ ಪಂಡಿತ್ ತಿಳಿಸಿದ್ದಾರೆ.

ಡಾನ್ 3 ಸಿನಿಮಾದ ವಿವಾದದ ಬಳಿಕ ರಣವೀರ್ ಸಿಂಗ್ ವಿರುದ್ಧ ಎಫ್ಡಬ್ಲುಐಸಿಇ ನಾನ್-ಕೋಆಪರೇಷನ್ ಘೋಷಿಸಿತ್ತು. ಇದರ ಬೆನ್ನಲ್ಲೇ ನಟನನ್ನು ಚಿತ್ರರಂಗದಿಂದ 3 ವರ್ಷ ಬ್ಯಾನ್ ಮಾಡಲಾಗಿದೆ ಎಂಬ ಸುದ್ದಿ ಹರಿದಾಡಿತ್ತು. ಈ ಕುರಿತು ಮಾಹಿತಿ ನೀಡಿರುವ ಅಶೋಕ್ ಪಂಡಿತ್, "ಬ್ಯಾನ್ ಮಾಡಲು ನಾವು ಕೋರ್ಟ್ ಅಲ್ಲ. ನಮ್ಮ ಸಂಘದ 30 ವಿಭಾಗಗಳ ಸದಸ್ಯರು ರಣವೀರ್ ಜೊತೆ ಕೆಲಸ ಮಾಡಬಾರದು ಎಂದು ಮಾತ್ರ ಸೂಚನೆ ನೀಡಿದ್ದೇವೆ" ಎಂದರು.
"ರಣವೀರ್ ಸಿಂಗ್ ಡಾನ್ 3 ಸಿನಿಮಾದಿಂದ ಹೊರಬಂದ ಬಳಿಕ ಈ ವಿವಾದ ಆರಂಭವಾಗಿದೆ. ನಿರ್ಮಾಪಕರಾದ ಫರ್ಹಾನ್ ಅಖ್ತರ್ ಹಾಗೂ ರಿತೇಶ್ ಸಿಧ್ವಾನಿ ಈಗಾಗಲೇ ಸಿನಿಮಾದ ಪ್ರೀ-ಪ್ರೊಡಕ್ಷನ್ಗಾಗಿ ಸುಮಾರು 45 ಕೋಟಿ ರೂ. ವೆಚ್ಚ ಮಾಡಿರುವುದಾಗಿ ತಿಳಿಸಿದೆ. ಈ ಹಿನ್ನೆಲೆ ಸಮಸ್ಯೆ ಬಗೆಹರಿಯುವವರೆಗೆ ರಣವೀರ್ ಜೊತೆ ಕೆಲಸ ಮಾಡದಂತೆ ಸದಸ್ಯರಿಗೆ ಸೂಚಿಸಲಾಗಿದೆ. ಈ ರೀತಿಯ ಘಟನೆಗಳು ನಿರ್ಮಾಪಕರಿಗೆ ದೊಡ್ಡ ನಷ್ಟ ಉಂಟುಮಾಡುತ್ತವೆ. ಎಲ್ಲರೂ ಕೂತು ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು" ಎಂದು ಹೇಳಿದರು.