ಚೆನ್ನೈ ಮೇ. 26 (DaijiworldNews/AA): ತಮಿಳುನಾಡು ಮುಖ್ಯಮಂತ್ರಿ ಹಾಗೂ ಖ್ಯಾತ ನಟ ದಳಪತಿ ಸಿ. ಜೋಸೆಫ್ ವಿಜಯ್ ಅವರನ್ನು ಕಾಲಿವುಡ್ ನಟ ವಿಶಾಲ್ ಮುಕ್ತಕಂಠದಿಂದ ಹೊಗಳಿದ್ದು, ವಿಜಯ್ ಅವರು 'ಅತ್ಯಂತ ಸಮರ್ಥ ನಟ, ರಾಜಕಾರಣಿ' ಎಂದಿದ್ದಾರೆ.

'ಮುಂದಿನ ದಿನಗಳಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಎಲ್ಲಾ ವಲಯಗಳಲ್ಲೂ ಇಂತಹ ಹಲವು ಸರ್ಕಾರಿ ಆದೇಶಗಳು ಹೊರಬೀಳಲಿ. ಆ ಮೂಲಕ ಪ್ರಗತಿಪರ ಬೆಳವಣಿಗೆಯಾಗಲಿ ಎಂದು ಎದುರು ನೋಡುತ್ತಿದ್ದೇನೆ. ನಮ್ಮ ಇಡೀ ಚಿತ್ರರಂಗದ ಪರವಾಗಿ ನಿಮಗೆ ದೊಡ್ಡ ಶಿಳ್ಳೆ' ಎಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಚಿತ್ರರಂಗದಲ್ಲಿ ಎದುರಾಗಿರುವ ಪ್ರಸ್ತುತ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಚಿತ್ರೋದ್ಯಮಿಗಳು ಇತ್ತೀಚೆಗಷ್ಟೇ ಸಿಎಂ ಅವರಿಗೆ ಕೆಲವು ಮನವಿಗಳನ್ನು ಸಲ್ಲಿಸಿದ್ದರು. ಈ ಹಿನ್ನೆಲೆ ಚಿತ್ರರಂಗದ ನೆರವಿಗಾಗಿ ಭರ್ಜರಿ ಕೊಡುಗೆಯೊಂದನ್ನು ಘೋಷಿಸಿರುವ ಸಿಎಂ ವಿಜಯ್ ಅವರು, ಇನ್ಮುಂದೆ ರಾಜ್ಯದಲ್ಲಿ ಹೊಸದಾಗಿ ಬಿಡುಗಡೆಯಾಗುವ ಸಿನಿಮಾಗಳಿಗೆ ಮೊದಲ ವಾರದಲ್ಲಿ ದಿನಕ್ಕೆ 5 ಪ್ರದರ್ಶನಗಳನ್ನು ನಡೆಸಲು ಚಿತ್ರಮಂದಿರಗಳಿಗೆ ಅನುಮತಿ ನೀಡಿದ್ದಾರೆ. ಇದೀಗ ವಿಜಯ್ ಅವರ ಈ ಮಹತ್ವದ ನಿರ್ಧಾರಕ್ಕೆ ನಟ ವಿಶಾಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.