ಮುಂಬೈ, ಮೇ. 15 (DaijiworldNews/AA): ಮಕ್ಕಳನ್ನು ಹೆರುವ ಬದಲು ನಾಯಿಗಳನ್ನು ಸಾಕಿ, ಏಕೆಂದರೆ ಅವು ಯಾವುದೇ ಸ್ವಾರ್ಥವಿಲ್ಲದ ನಿಜವಾದ ಪ್ರೀತಿಯನ್ನು ನೀಡುತ್ತವೆ ಎಂದು ಬಾಲಿವುಡ್ನ ಖ್ಯಾತ ನಟಿ ಶೆಫಾಲಿ ಶಾ ಹೇಳಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಮದುವೆ, ರಿಲೇಷನ್ಶಿಪ್ ಮತ್ತು ಮಕ್ಕಳ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದ ಅವರು, "ಯುವಕರು ತಮ್ಮನ್ನು ತಾವು ಸರಿಯಾಗಿ ಅರ್ಥಮಾಡಿಕೊಳ್ಳುವ ಮೊದಲು ಜೀವನದ ಇಂತಹ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವಸರ ಪಡಬಾರದು. ನೀವಿನ್ನೂ ಮಕ್ಕಳಾಗಿದ್ದಾಗ ಮದುವೆಯ ನಿರ್ಧಾರ ತೆಗೆದುಕೊಳ್ಳಬೇಡಿ. ಆ ವಯಸ್ಸಿನಲ್ಲಿ ನಿಮಗೆ ನಿಮ್ಮ ಬಗ್ಗೆಯೇ ಸರಿಯಾದ ತಿಳುವಳಿಕೆ ಇರುವುದಿಲ್ಲ. ಹಾಗಾಗಿ ದಯವಿಟ್ಟು ನಿಧಾನಿಸಿ" ಎಂದಿದ್ದಾರೆ.
"ಜೀವನದ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮುನ್ನ ಜನರನ್ನ ಭೇಟಿಯಾಗಿ, ಅವರನ್ನು ಅರ್ಥಮಾಡಿಕೊಳ್ಳಿ. ನೀವು ಮದುವೆ ಎಂಬ ವ್ಯವಸ್ಥೆಯನ್ನು ನಂಬದಿದ್ದರೆ, ದಯವಿಟ್ಟು ಆ ಸಾಹಸಕ್ಕೆ ಕೈಹಾಕಬೇಡಿ. ಏಕೆಂದರೆ ಸಂಸಾರ ನಡೆಸುವುದು ಅಷ್ಟು ಸುಲಭದ ಕೆಲಸವಲ್ಲ" ಎಂದು ತಿಳಿಸಿದ್ದಾರೆ.
"ಭಾವನಾತ್ಮಕವಾಗಿ ಪ್ರಬುದ್ಧರಾಗುವ ಮುನ್ನ, ಜೀವನ ಹಾಗೂ ಸಂಬಂಧಗಳಿಂದ ತಮಗೇನು ಬೇಕು ಎಂಬುದು ಸಂಪೂರ್ಣವಾಗಿ ಖಚಿತವಾಗುವ ಮುನ್ನ ಯಾರೂ ಮದುವೆಯ ನಿರ್ಧಾರವನ್ನು ಸಾಧಾರಣವಾಗಿ ತೆಗೆದುಕೊಳ್ಳಬಾರದು. ನಾನೊಂದು ಮಾತು ಹೇಳುತ್ತೇನೆ. ಇದಕ್ಕಾಗಿ ನನ್ನನ್ನು ಜನ ಕೆಟ್ಟ ರೀತಿಯಲ್ಲಿ ಟ್ರೋಲ್ ಮಾಡಬಹುದು. ಆದರೂ ಪರವಾಗಿಲ್ಲ, ಮಕ್ಕಳನ್ನು ಮಾಡಿಕೊಳ್ಳಬೇಡಿ. ಅದರ ಬದಲು ನಾಯಿಗಳನ್ನು ಸಾಕಿ. ಕೇವಲ ನಾಯಿಗಳನ್ನು ತಂದುಕೊಳ್ಳಿ" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.