ಮುಂಬೈ, ಮೇ. 10 (DaijiworldNews/AA): ಬಾಲಿವುಡ್ ನಟಿ ಸೋನಂ ಕಪೂರ್ ಮತ್ತು ಉದ್ಯಮಿ ಆನಂದ್ ಅಹುಜಾ ದಂಪತಿ ತಮ್ಮ ಎರಡನೇ ಮಗುವಿನ ಹೆಸರನ್ನು ಘೋಷಿಸಿದ್ದಾರೆ.

ಕಳೆದ ಮಾರ್ಚ್ 29 ರಂದು ಸೋನಂ ಕಪೂರ್ ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದ್ದರು. ಈಗ ಈ ದಂಪತಿ ತಮ್ಮ ಎರಡನೇ ಮಗನಿಗೆ 'ರುದ್ರಲೋಖ್ ಕಪೂರ್ ಅಹುಜಾ' ಎಂದು ನಾಮಕರಣ ಮಾಡಿದ್ದಾರೆ. ಶನಿವಾರ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಇಬ್ಬರು ಮಕ್ಕಳೊಂದಿಗೆ ಇರುವ ಸುಂದರವಾದ ಫೋಟೋಗಳನ್ನು ಸೋನಂ ಹಂಚಿಕೊಂಡಿದ್ದರು. ಜೊತೆಗೆ ತಮ್ಮ ಮಗನ ಹೆಸರಿನಲ್ಲಿರುವ ದೈವಿಕ ಅರ್ಥವನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ.
ವಿಷ್ಣುವಿನ ಕೃಪೆಯಿಂದ ಪವಿತ್ರ ಏಕಾದಶಿಯ ದಿನದಂದು ಜನಿಸಿದ ನಮ್ಮ ಎರಡನೇ ಮಗ ನಮಗೆ ಸಿಕ್ಕ ಆಶೀರ್ವಾದ ಎಂದು ಪೋಸ್ಟ್ ಮಾಡಿರುವ ಸೋನಂ, ತಮ್ಮ ಮೊದಲ ಮಗ ವಾಯು ಹೆಸರಿಗೂ ಮತ್ತು ಈಗಿನ ರುದ್ರಲೋಖ್ ಹೆಸರಿಗೂ ಇರುವ ನಂಟನ್ನು ವಿವರಿಸಿರುವ ಅವರು, ವೇದಗಳ ಪ್ರಕಾರ ರುದ್ರ ಎಂದರೆ ಅತ್ಯಂತ ಬಲಶಾಲಿ ಮತ್ತು ದುಃಖವನ್ನು ಮೂಲದಿಂದಲೇ ನಿರ್ಮೂಲನೆ ಮಾಡುವವನು ಎಂದರ್ಥ. ವಾಯು ಜೀವವನ್ನು ಪೋಷಿಸಿದರೆ, ರುದ್ರ ಶಕ್ತಿ ಮತ್ತು ರೂಪಾಂತರದ ಸಂಕೇತ ಎಂದು ಬರೆದುಕೊಂಡಿದ್ದಾರೆ.