ಚೆನ್ನೈ,ಮೇ. 08 (DaijiworldNews/AK): ಕಾಲಿವುಡ್ನ ಹಿಟ್ ಜೋಡಿ ಎನಿಸಿಕೊಂಡಿರುವ ದಳಪತಿ ವಿಜಯ್ ಮತ್ತು ತ್ರಿಷಾ ಕೃಷ್ಣನ್ ಅವರ ಸ್ನೇಹಕ್ಕೆ ಎರಡು ದಶಕಗಳ ಇತಿಹಾಸವಿದೆ. ಸದ್ಯ ತಮಿಳುನಾಡು ರಾಜಕೀಯದಲ್ಲಿ ವಿಜಯ್ ಅವರ ಟಿವಿಕೆ ಪಕ್ಷ 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಐತಿಹಾಸಿಕ ಗೆಲುವಿನ ಬೆನ್ನಲ್ಲೇ, ವಿಜಯ್ ಅವರ ವ್ಯಕ್ತಿತ್ವದ ಬಗ್ಗೆ ನಟಿ ತ್ರಿಷಾ ಈ ಹಿಂದೆ ಆಡಿದ್ದ ಮಾತುಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ.

ವಿಜಯ್ ಮತ್ತು ತ್ರಿಷಾ ಜೋಡಿ ‘ಗಿಲ್ಲಿ’, ‘ಕುರುವಿ’, ‘ಲಿಯೋ’ ಸೇರಿದಂತೆ ಕೆಲವು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. ಹಲವು ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ತ್ರಿಷಾ, ವಿಜಯ್ ಅವರಲ್ಲಿ ತಮಗೆ ಇಷ್ಟವಾಗದ ಒಂದು ಅಂಶದ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. ಆ ವಿಷಯ ಮತ್ತೆ ಚರ್ಚೆ ಆಗಿದೆ.
ವಿಜಯ್ ಸೆಟ್ನಲ್ಲಿ ತುಂಬಾ ಸೈಲೆಂಟ್ ಆಗಿರುತ್ತಾರೆ. ಶೂಟಿಂಗ್ ಇಲ್ಲದ ಸಮಯದಲ್ಲಿ ಎಲ್ಲರೂ ಹರಟೆ ಹೊಡೆಯುತ್ತಿದ್ದರೆ, ಇವರು ಮಾತ್ರ ಯಾವುದೋ ಮೂಲೆಯಲ್ಲಿ ಗೋಡೆ ಮುಖ ಮಾಡಿ ಗಂಟೆಗಟ್ಟಲೆ ಕುಳಿತಿರುತ್ತಾರೆ. ಆರಂಭದಲ್ಲಿ ನನಗೆ ಅವರ ಈ ಮೌನ ಅಸಹನೀಯ ಎನಿಸುತ್ತಿತ್ತು ಮತ್ತು ಅವರ ಬಗ್ಗೆ ತಪ್ಪು ಕಲ್ಪನೆ ಮೂಡಿಸಿತ್ತು’ ಎಂದು ತ್ರಿಷಾ ಹೇಳಿದ್ದರು.
ಅಷ್ಟೇ ಅಲ್ಲದೆ, ವಿಜಯ್ ಅವರನ್ನು ‘ಸೈಲೆಂಟ್ ಕಿಲ್ಲರ್’ ಎಂದು ಕರೆದಿದ್ದ ತ್ರಿಷಾ, ‘ಅವರು ಏನನ್ನೂ ಹೇಳದೆಯೇ ತಮ್ಮ ನಿಗೂಢ ಆಕರ್ಷಣೆಯಿಂದ ಎಲ್ಲರನ್ನೂ ಸೆಳೆಯಬಲ್ಲರು’ ಎಂದು ಬಣ್ಣಿಸಿದ್ದರು.
ಈಗ ವಿಜಯ್ ರಾಜಕೀಯ ಅಖಾಡದಲ್ಲಿ ‘ಸೈಲೆಂಟ್’ ಆಗಿಯೇ ಕ್ರಾಂತಿ ಮಾಡಿದ್ದಾರೆ. 234 ಸದಸ್ಯರ ವಿಧಾನಸಭೆಯಲ್ಲಿ 108 ಸ್ಥಾನಗಳನ್ನು ಗೆದ್ದು ಮ್ಯಾಜಿಕ್ ಮಾಡಿದ್ದಾರೆ.