ತಮಿಳುನಾಡು, ಮೇ. 05 (DaijiworldNews/AA): ತಮಿಳುನಾಡಿನಲ್ಲಿ ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಭರ್ಜರಿ ಗೆಲುವು ಸಾಧಿಸಿದ್ದು, ಅವರಿಗೆ ನಟಿ ರಶ್ಮಿಕಾ ಮಂದಣ್ಣ, ತಲೈವಾ ರಜನಿ ಕಾಂತ್, ಕಮಲ್ ಹಾಸನ್ ಸೇರಿದಂತೆ ಮೊದಲಾದ ಗಣ್ಯರು ಶುಭಹಾರೈಸಿದ್ದಾರೆ.

ವಿಜಯ್ಯವರ ಯಶಸ್ಸಿಗೆ ಸಂತಸ ವ್ಯಕ್ತಪಡಿಸಿರುವ ತಲೈವಾ ರಜನಿಕಾಂತ್, "ಇತ್ತೀಚೆಗೆ ಮುಕ್ತಾಯಗೊಂಡ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿಗಾಗಿ ವಿಜಯಶಾಲಿ ತಮಿಳಗ ವೆಟ್ರಿ ಕಳಗಂನ ಅಧ್ಯಕ್ಷ ತಿರು ವಿಜಯ್ ಮತ್ತು ಅವರ ಪಕ್ಷದ ಸದಸ್ಯರಿಗೆ ನನ್ನ ಅಭಿನಂದನೆಗಳು" ಎಂದು ಶುಭಕೋರಿದ್ದಾರೆ.
ವಿಜಯ್ಯವರ ಗೆಲುವಿಗೆ ಸಂತಸ ವ್ಯಕ್ತಪಡಿಸಿರುವ ನಟಿ ರಶ್ಮಿಕಾ ಮಂದಣ್ಣ, "ಅಭಿನಂದನೆಗಳು ವಿಜಯ್ ಸರ್! ತುಂಬಾ ಸಂತೋಷವಾಗುತ್ತಿದೆ. ಈ ಹೊಸ ಯುಗದಲ್ಲಿ ನಿಮ್ಮನ್ನು ನೋಡಲು ಉತ್ಸುಕರಾಗಿದ್ದೇವೆ, ನಿಮಗೆ ಒಳ್ಳೆಯದಾಗಲಿ" ಎಂದು ಹಾರೈಸಿದ್ದಾರೆ.
ವಿಜಯ್ ಗೆ ಶುಭಹಾರೈಸಿರುವ ಹಿರಿಯ ನಟ ಕಮಲ್ ಹಾಸನ್ ಅವರು, "ಜನರ ವಿಶ್ವಾಸ ಗಳಿಸಿ ತಮ್ಮ ಮೊದಲ ಚುನಾವಣೆಯಲ್ಲಿಯೇ ಅದ್ಭುತ ಗೆಲುವು ಸಾಧಿಸಿದ ವಿಜಯಶಾಲಿ ತಮಿಳಗ ವೆಟ್ರಿ ಕಳಗಂ ನಾಯಕ ತಿರು. ವಿಜಯ್ ಮತ್ತು ಅವರ ಪಕ್ಷದ ಸದಸ್ಯರಿಗೆ ನನ್ನ ಅಭಿನಂದನೆಗಳು. ಅವರ ಸಾರ್ವಜನಿಕ ಸೇವೆ ವೃದ್ಧಿಸಲಿ" ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇವರಷ್ಟೇ ಅಲ್ಲದೇ, ನಟ ಧನುಷ್, ರಾಮ್ ಚರಣ್, ಚಿರಂಜೀವಿ, ಮಹೇಶ್ ಬಾಬು, ಅನಿರುದ್ಧ್ ರವಿಚಂದರ್, ಕಾಜಲ್ ಅಗರ್ವಾಲ್, ಕಾರ್ತಿ ಮತ್ತು ಸಿಲಂಬರಸನ್, ಗಾಯಕ ಎ.ಆರ್ ರೆಹಮಾನ್ ಸೇರಿದಂತೆ ಅನೇಕ ಸಿನಿ ಗಣ್ಯರು ಶುಭಾಶಯ ಕೋರಿದ್ದಾರೆ.