ಬೆಂಗಳೂರು, ಮೇ. 01(DaijiworldNews/TA): ಕನ್ನಡ ಚಿತ್ರರಂಗಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಮ್ಮೆಯ ಕ್ಷಣವೊಂದು ದೊರೆತಿದೆ. ಕೇವಲ 22 ವರ್ಷದ ಯುವ ಚಲನಚಿತ್ರ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣಗೆ 79ನೇ ಕೇನ್ಸ್ ಚಲನಚಿತ್ರೋತ್ಸವದಲ್ಲಿ ನಡೆಯುವ ‘ವರ್ಲ್ಡ್ ವುಮನ್ ಕೇನ್ಸ್ ಅಜೆಂಡಾ 2026’ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣಕಾರರಾಗಿ ಆಹ್ವಾನ ಬಂದಿದೆ. ಕನ್ನಡದ ನಿರ್ದೇಶಕಿಯೊಬ್ಬರಿಗೆ ಈ ಮಟ್ಟದ ವೇದಿಕೆ ಸಿಗುತ್ತಿರುವುದು ಮೊದಲ ಬಾರಿ ಎಂಬ ವಿಶೇಷತೆ ಇದಾಗಿದೆ.

ಈ ಶೃಂಗಸಭೆಯಲ್ಲಿ ಕರೆನ್ ಕ್ಷಿತಿ ಸುವರ್ಣ ಅವರು ಫೋರ್ಬ್ಸ್ನ ಕಾರ್ಯನಿರ್ವಾಹಕ ಉಪಾಧ್ಯಕ್ಷೆ ಮೋಯಿರಾ ಫೋರ್ಬ್ಸ್, ಎಮ್ಮಿ ಪ್ರಶಸ್ತಿ ವಿಜೇತ ನಟಿ ಶೋಹ್ರೆ ಅಗ್ದಾಶ್ಲೂ, ನಟಿ ಟಮೆರಾ ಮೌರಿ ಹಾಗೂ USC ಅನೆನ್ಬರ್ಗ್ ಇನ್ಕ್ಲೂಷನ್ ಇನಿಶಿಯೇಟಿವ್ ಸಂಸ್ಥಾಪಕಿ ಸ್ಟೇಸಿ ಸ್ಮಿತ್ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ. ಮೇ 12 ಮತ್ತು 13ರಂದು ನಡೆಯಲಿರುವ ಈ ಕಾರ್ಯಕ್ರಮವನ್ನು ಜಾಗತಿಕವಾಗಿ 10 ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರು ವೀಕ್ಷಿಸುವ ನಿರೀಕ್ಷೆಯಿದೆ.
ಈ ವೇದಿಕೆಯಲ್ಲಿ ಕರೆನ್ ಅವರು ಸಿನಿಮಾ, ಕೃತಕ ಬುದ್ಧಿಮತ್ತೆ (AI) ಹಾಗೂ ಸಾಮಾಜಿಕ ಕ್ರಿಯಾಶೀಲತೆ ಕುರಿತು ಮಾತನಾಡಲಿದ್ದಾರೆ. ಕನ್ನಡದ ಯುವ ನಿರ್ದೇಶಕಿಗೆ ಇಂತಹ ಅಂತರರಾಷ್ಟ್ರೀಯ ವೇದಿಕೆ ಸಿಕ್ಕಿರುವುದು ಭಾರತೀಯ ಚಿತ್ರರಂಗಕ್ಕೂ ಮಹತ್ವದ ಕ್ಷಣವಾಗಿದೆ.
ಅದೇ ಸಂದರ್ಭದಲ್ಲಿ, ಅವರ ನಿರ್ದೇಶನದ ಚೊಚ್ಚಲ ಹಿಂದಿ–ಕನ್ನಡ ಚಿತ್ರ ‘ಸೆಪ್ಟೆಂಬರ್ 21’ ಮೇ 16, 2026ರಂದು ಕೇನ್ಸ್ನ ಪಾಲೈಸ್ ಥಿಯೇಟರ್ನಲ್ಲಿ ಮಾರ್ಷೆ ಡು ಫಿಲ್ಮ್ ವಿಭಾಗದಲ್ಲಿ ವಿಶ್ವ ಪ್ರೀಮಿಯರ್ ಕಾಣಲಿದೆ. ಈ ಚಿತ್ರವು ಆಲ್ಜೈಮರ್ ಕಾಯಿಲೆ ಮತ್ತು ಆರೈಕೆದಾರರ ಅಪ್ರಕಟಿತ ಹೋರಾಟವನ್ನು ಆಧರಿಸಿದೆ. ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ, ಪ್ರವೀಣ್ ಸಿಂಗ್ ಸಿಸೋಡಿಯಾ, ಝರೀನಾ ವಹಾಬ್, ಅಜಿತ್ ಶಿಧಾಯೆ ಮತ್ತು ಅಮಿತ್ ಬೆಹ್ಲ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಈ ಚಿತ್ರವು ಈ ಹಿಂದೆ ಗೋವಾದ 56ನೇ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ವರ್ಕ್-ಇನ್-ಪ್ರೋಗ್ರೆಸ್’ ವಿಭಾಗದಲ್ಲಿ ಪ್ರದರ್ಶನಗೊಂಡಿತ್ತು. ಮೇ 22ರಂದು ಭಾರತದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಈ ಸಾಧನೆ ಕುರಿತು ಮಾತನಾಡಿರುವ ಕರೆನ್ ಕ್ಷಿತಿ ಸುವರ್ಣ ಅವರು, “ಕೇನ್ಸ್ನಲ್ಲಿ ಕರ್ನಾಟಕದ ಕಥೆಯನ್ನು ಹೇಳಲು ಸಿಕ್ಕ ಅವಕಾಶ ನನ್ನ ಜೀವನದ ಅವಿಸ್ಮರಣೀಯ ಕ್ಷಣ. ‘ಸೆಪ್ಟೆಂಬರ್ 21’ ಪ್ರತಿಯೊಬ್ಬ ಆರೈಕೆದಾರನ ಮೌನ ನೋವಿಗೆ ಧ್ವನಿ. ಪ್ರಾದೇಶಿಕ ಕಥೆಗಳು ಜಾಗತಿಕವಾಗಬಹುದು ಎಂಬುದಕ್ಕೆ ಇದು ಸಾಕ್ಷಿ” ಎಂದು ಹೇಳಿದ್ದಾರೆ. ಈ ಸಾಧನೆಯಿಂದ ಕನ್ನಡ ಚಿತ್ರರಂಗಕ್ಕೆ ಜಾಗತಿಕ ಮಟ್ಟದಲ್ಲಿ ಮತ್ತೊಂದು ಗೌರವ ಸಿಕ್ಕಿದ್ದು, ಯುವ ನಿರ್ದೇಶಕರಿಗೆ ಹೊಸ ಪ್ರೇರಣೆಯಾಗಿ ಪರಿಣಮಿಸಿದೆ.