ಮುಂಬೈ, ಏ. 27 (DaijiworldNews/AK): ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರು ಆಮ್ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿ ಭಾರತೀಯ ಜನತಾ ಪಕ್ಷ ಸೇರಿರುವುದು ಭಾರಿ ಚರ್ಚೆಗೆ ಕಾರಣ ಆಗಿದೆ.

ಅವರು ಬಿಜೆಪಿ ಸೇರಿದ 24 ಗಂಟೆಗಳ ಒಳಗೆ, ಇನ್ಸ್ಟಾಗ್ರಾಮ್ ಫಾಲೋವರ್ಗಳ ಸಂಖ್ಯೆಯಲ್ಲಿ ಭಾರಿ ಕುಸಿತ ಕಂಡುಬಂದಿದೆ. ಈವರೆಗೂ 20 ಲಕ್ಷಕ್ಕೂ ಅಧಿಕ ಜನರು ರಾಘವ್ ಚಡ್ಡಾ ಅವರನ್ನು ಅನ್ಫಾಲೋ ಮಾಡಿದ್ದಾರೆ. ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ರಾಘವ್ ಚಡ್ಡಾ ಪತ್ನಿ ಪರಿಣೀತಿ ಚೋಪ್ರಾ ಅವರನ್ನು ಕೂಡ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
ರಾಘವ್ ಚಡ್ಡಾ ಅವರು ಬಿಜೆಪಿ ಸೇರಿರುವುದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಬಿಜೆಪಿ ಸೇರುವ ಅವರ ನಿರ್ಧಾರವನ್ನು ಜನರು ಕಟುವಾಗಿ ಟೀಕಿಸಿದ್ದಾರೆ. ಇದರ ಬೆನ್ನಲ್ಲೇ, ಅವರು ಈ ಹಿಂದೆ ಬಿಜೆಪಿಯನ್ನು ಟೀಕಿಸಿದ್ದ ಹಳೆಯ ವಿಡಿಯೋಗಳು ಮತ್ತು ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಮುನ್ನೆಲೆಗೆ ಬಂದಿದ್ದು, ಅವರ ಈ ರಾಜಕೀಯ ಬದಲಾವಣೆಯ ಕುರಿತಾದ ಚರ್ಚೆಯನ್ನು ಮತ್ತಷ್ಟು ತೀವ್ರಗೊಳಿಸಿವೆ.
ಅದೇ ರೀತಿ, ರಾಘವ್ ಚಡ್ಡಾ ಪತ್ನಿ ಪರಿಣೀತಿ ಚೋಪ್ರಾ ಅವರ ಒಂದು ಹಳೇ ವಿಡಿಯೋ ಕೂಡ ವೈರಲ್ ಆಗುತ್ತಿದೆ. ‘ನಾನು ಎಂದಿಗೂ ರಾಜಕಾರಣಿಯನ್ನು ಮದುವೆ ಆಗಲ್ಲ’ ಎಂದು ಪರಿಣೀತಿ ಚೋಪ್ರಾ ಅವರು ಹೇಳಿದ್ದರು. ಆದರೆ ಆ ಮಾತನ್ನು ಮರೆತು ಅವರು ಮದುವೆ ಆಗಿದ್ದೇ ರಾಜಕಾರಣಿ ರಾಘವ್ ಚಡ್ಡಾ ಅವರನ್ನು. ಹಾಗಾಗಿ, ಮಾತು ಬದಲಿಸುವುದರಲ್ಲಿ ಗಂಡ-ಹೆಂಡತಿ ಇಬ್ಬರೂ ಒಂದೇ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.