ಮುಂಬೈ, ಏ. 13 (DaijiworldNews/AA): ಭಾರತೀಯ ಚಿತ್ರರಂಗದ ಹಿರಿಯ ಗಾಯಕಿ ಆಶಾ ಭೋಸ್ಲೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಭರದಲ್ಲಿ ಲತಾ ಮಂಗೇಶ್ಕರ್ ಫೋಟೋವನ್ನು ಹಂಚಿಕೊಳ್ಳುವ ಮೂಲಕ ನಟಿ ಅಥಿಯಾ ಶೆಟ್ಟಿ ಅವರು ಎಡವಟ್ಟು ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಏಪ್ರಿಲ್ 12ರಂದು ಮುಂಬೈನಲ್ಲಿ ಆಶಾ ಭೋಸ್ಲೆ ನಿಧನರಾದ ನಂತರ, ಸುನಿಲ್ ಶೆಟ್ಟಿ ಅವರ ಪುತ್ರಿ ಅಥಿಯಾ ಶೆಟ್ಟಿ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಸಂತಾಪ ಸೂಚಕ ಸಂದೇಶವೊಂದನ್ನು ಹಾಕಿದ್ದರು. ಆದರೆ, ಆ ಸಂದೇಶದೊಂದಿಗೆ ಅವರು ಆಶಾ ಭೋಸ್ಲೆ ಬದಲಾಗಿ ಲತಾ ಮಂಗೇಶ್ಕರ್ ಅವರ ಫೋಟೋವನ್ನು ಹಂಚಿಕೊಂಡಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ.
ತಾವು ಹಂಚಿಕೊಂಡಿದ್ದು ಲತಾ ಮಂಗೇಶ್ಕರ್ ಅವರ ಫೋಟೋ ಎಂಬುದು ಅರಿವಾದ ತಕ್ಷಣ ಅಥಿಯಾ ಆ ಪೋಸ್ಟ್ ಡಿಲೀಟ್ ಮಾಡಿ, ನಂತರ ಆಶಾ ಭೋಸ್ಲೆ ಅವರ ಸರಿಯಾದ ಫೋಟೋವನ್ನು ಹಂಚಿಕೊಂಡಿದ್ದಾರೆ. ಆದರೆ ಅದಾಗಲೇ ಅದರ ಸ್ಕ್ರೀನ್ಶಾಟ್ಗಳು ವೈರಲ್ ಆಗಿದ್ದವು. ಅಥಿಯಾ ಅವರ ಈ ನಡೆಯನ್ನು 'ಬೇಜವಾಬ್ದಾರಿತನ' ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ.
'ಬುದ್ಧಿಯಿಲ್ಲದ ಬ್ಯೂಟಿ', 'ಅಥಿಯಾ ಶೆಟ್ಟಿ ಅವರಿಗೆ ಕನಿಷ್ಠ ಜ್ಞಾನವೂ ಇಲ್ಲ. ಆಶಾ ಭೋಸ್ಲೆ ಅವರ ಬದಲಿಗೆ ಲತಾ ಜೀ ಫೋಟೋ ಹಾಕಿದ್ದಾರೆ. ನೆಪೋ ಕಿಡ್ಗಳಿಗೆ ಕಷ್ಟಪಡದೆ ಪ್ರಸಿದ್ಧಿ ಬೇಕು. ಅದಕ್ಕೇ ಇಂತಹ ಎಡವಟ್ಟುಗಳನ್ನು ಮಾಡುತ್ತಾರೆ', 'ಇಂತಹ ಗಂಭೀರ ವಿಷಯಗಳಲ್ಲಿ ಇಷ್ಟು ಅಸಡ್ಡೆ ತೋರುವುದು ಸರಿಯಲ್ಲ. ಕನಿಷ್ಠ ಫೋಟೋ ಸರಿಯಾಗಿದೆಯೇ ಎಂದು ಪರಿಶೀಲಿಸುವ ವ್ಯವಧಾನವೂ ಇಲ್ಲದಿದ್ದರೆ ಸುಮ್ಮನಿರಬೇಕು', 'ತಮ್ಮದೇ ಚಿತ್ರರಂಗದ ಹಿರಿಯರ ಬಗ್ಗೆ ಇಷ್ಟೊಂದು ಅಜ್ಞಾನ ಸರಿಯಲ್ಲ' ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.