ಮುಂಬೈ, ಏ. 13 (DaijiworldNews/AK): ಆಶಾ ಭೋಸ್ಲೆ ಅವರು ಬರೋಬ್ಬರಿ 80 ವರ್ಷದ ತಮ್ಮ ಗಾಯನದ ಬದುಕನ್ನು ತೊರೆದು, ಹಾಡು ನಿಲ್ಲಿಸಿದ್ದಾರೆ. ಇಂದು (ಏ.12) ಸಂಜೆ 4 ಗಂಟೆಗೆ ಮುಂಬೈನ ಶಿವಾಜಿ ಪಾರ್ಕ್ನಲ್ಲಿ ಆಶಾ ಭೋಸ್ಲೆ ಅವರ ಅಂತ್ಯಕ್ರಿಯೆ ನಡೆಯಲಿದೆ.

ಎಂಟು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಸಿನಿಮಾದ ಸಂಗೀತ ಲೋಕದ ಉಸಿರಾಗಿದ್ದ ಸ್ವರ ಸಾಮ್ರಾಜ್ಞಿ ಆಶಾ ಭೋಸ್ಲೆ ಅವರು 10ನೇ ವಯಸ್ಸಿಗೆ ಹಾಡಲು ಶುರು ಮಾಡಿದ್ದರು. ವಿವಿಧ ಭಾಷೆಗಳಲ್ಲಿ ಬರೋಬ್ಬರಿ 12 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.
8 ದಶಕಗಳ ಸುಂದರ ಬದುಕಿನ ಯಾನ ಮುಗಿಸಿದ ಸ್ವರ ಸಾಮ್ರಾಜ್ಞಿ ನಿನ್ನೆ (ಏ.12) ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ.
ಶನಿವಾರ ಹೃದಯ ಸ್ತಂಭನದಿಂದ ಆಶಾ ಭೋಸ್ಲೆಯವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ಮಧ್ಯಾಹ್ನ 12 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ. 10ನೇ ವಯಸ್ಸಿನಲ್ಲಿ ಚಲಾ ಚಲ್ ನವ್ ಬಾಲಾ ಎಂಬ ಮರಾಠಿ ಸಿನಿಮಾಗೆ ಹಾಡು ಹಾಡುವ ಮೂಲಕ ತಮ್ಮ ಗಾಯನ ಬದುಕು ಆರಂಭಿಸಿ, ನಂತರ ಹಿಂದಿರುಗಿ ನೋಡಲೇ ಇಲ್ಲ.
1950ರ ದಶಕದಲ್ಲಿ ತಮ್ಮ ಕೆರಿಯರ್ನ ತುತ್ತತುದಿಗೆ ಏರಿದರು. ಕಾಲಾನಂತರದಲ್ಲಿ, ಅವರು ಜಾಗತಿಕವಾಗಿ ಅತ್ಯಂತ ಪ್ರಸಿದ್ಧ ಹಿನ್ನೆಲೆ ಗಾಯಕರಲ್ಲಿ ಒಬ್ಬರಾದರು. ದಮ್ ಮಾರೋ ಧಮ್.. ಯೇ ಮೇರಾ ದಿಲ್ ಪ್ಯಾರ ಕಾ ದಿವಾನಾ.. ರಂಗೀಲಾರೆ ರೀತಿಯ ಮಾದಕ ಹಾಡುಗಳ ಜೊತೆ ಚುರಾಲಿಯಾ ಹೈ ತುಮ್ನೇ.. ರಾಧಾ ಕೈಸೇನ ಜಲೆದಂತ ಮಾಧುರ್ಯ ಭರಿತ ಹಾಡುಗಳನ್ನು ಕೂಡ ದಿವ್ಯ ಕಂಠದ ಗಾಯಕಿ ಹಾಡಿದ್ದಾರೆ.