ಬೆಂಗಳೂರು, ಏ. 12 (DaijiworldNews/TA): ನಗರದ ಕಗ್ಗದಾಸಪುರದಲ್ಲಿ ಬೀದಿ ನಾಯಿಗಳನ್ನು ಅಮಾನವೀಯವಾಗಿ ಚೀಲಗಳಲ್ಲಿ ಕಟ್ಟಿ ಸಾಗಿಸಿದ ಆರೋಪ ಕೇಳಿಬಂದಿರುವ ಘಟನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಡಿಆರ್ಡಿಒ ಸಂಕೀರ್ಣದಲ್ಲಿ ನಡೆದ ಈ ಪ್ರಕರಣದ ವಿರುದ್ಧ ಶ್ವಾನ ಪ್ರಿಯರು ತೀವ್ರ ಪ್ರತಿಭಟನೆ ನಡೆಸಿದ್ದು, ಈ ಹೋರಾಟಕ್ಕೆ ನಟಿ ರಮ್ಯಾ ದಿವ್ಯ ಸ್ಪಂದನ ಸಹ ಧ್ವನಿಯಾಗಿದ್ದಾರೆ.

ಏಪ್ರಿಲ್ 11ರಂದು ಫ್ರೀಡಂ ಪಾರ್ಕ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾದ ರಮ್ಯಾ ದಿವ್ಯ ಸ್ಪಂದನ ಅವರು, ನಾಯಿಗಳ ಮೇಲಿನ ದೌರ್ಜನ್ಯ ದೃಶ್ಯಗಳನ್ನು ಕಂಡು ಭಾವುಕರಾಗಿ ಕಣ್ಣೀರಿಟ್ಟರು. “ನಾಯಿಗಳಿಗೆ ಏನಾಗಿರಬಹುದು ಎಂದು ಯೋಚಿಸಿದರೆ ತುಂಬಾ ನೋವಾಗುತ್ತದೆ. ಈ ಘಟನೆ ಬಗ್ಗೆ ತಿಳಿದು ನನಗೆ ಆಘಾತವಾಗಿದೆ” ಎಂದು ಅವರು ಹೇಳಿದ್ದಾರೆ.
ಸಂಸ್ಥೆಯೊಂದು ಇಂತಹ ಬೇಜವಾಬ್ದಾರಿಯ ನಡೆ ತೋರಿರುವುದು ಅಸಮಾಧಾನಕಾರಿಯಾಗಿದೆ ಎಂದು ಅವರು ಖಂಡಿಸಿದ್ದಾರೆ. “ನಾಪತ್ತೆಯಾಗಿರುವ ನಾಯಿಗಳು ಸುರಕ್ಷಿತವಾಗಿದ್ದರೆ ನಮಗೆ ತೋರಿಸಿ, ಇಲ್ಲದಿದ್ದರೆ ಈ ಕೃತ್ಯಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಅವರು ಆಗ್ರಹಿಸಿದ್ದಾರೆ.
ಈ ಪ್ರಕರಣದಲ್ಲಿ ಸುಮಾರು 20ಕ್ಕೂ ಹೆಚ್ಚು ನಾಯಿಗಳು ನಾಪತ್ತೆಯಾಗಿರುವ ಮಾಹಿತಿ ದೊರೆತಿದ್ದು, ಪ್ರಾಣಿ ಜನನ ನಿಯಂತ್ರಣ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಸಿ.ವಿ. ರಾಮನ್ ನಗರ ಅನಿಮಲ್ ಸ್ಕ್ವಾಡ್ ಮತ್ತು ಪ್ರಾಣಿ ಕಲ್ಯಾಣ ಹೋರಾಟಗಾರ್ತಿ ಪ್ರಿಯಾ ಚೆಟ್ಟಿ ರಾಜಗೋಪಾಲ್ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆದಿದೆ.
ಈ ಘಟನೆ ಸಂಬಂಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈಗಾಗಲೇ ಹೈಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ಮುಂದಿನ ವಿಚಾರಣೆ ಏಪ್ರಿಲ್ 16ರಂದು ನಡೆಯಲಿದೆ. ಪ್ರಾಣಿಗಳ ಕಲ್ಯಾಣದ ವಿಷಯದಲ್ಲಿ ಸದಾ ಧ್ವನಿ ಎತ್ತುತ್ತಿರುವ ರಮ್ಯಾ ದಿವ್ಯ ಸ್ಪಂದನ ಅವರು, ಈ ಹಿಂದೆ ಕೂಡ ಇಂತಹ ಘಟನೆಗಳನ್ನು ತೀವ್ರವಾಗಿ ಖಂಡಿಸಿ ಮಾತನಾಡಿದ್ದರು.