ವಾರಣಾಸಿ, ಏ. 05 (DaijiworldNews/TA): ಯೋಗಿ ಆದಿತ್ಯನಾಥ್ ವಾರಣಾಸಿಯಲ್ಲಿ ಆಯೋಜಿಸಿದ್ದ ವಿಕ್ರಮಾಧಿತ್ಯ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿ, “ಸಿನಿಮಾಗಳಲ್ಲಿ ಅಪರಾಧ ಮಾಡುವ ಖಳನಾಯಕರನ್ನು ವೈಭವೀಕರಿಸುವುದು ಅಥವಾ ಅವರನ್ನು ಹೀರೋಗಳಂತೆ ತೋರಿಸುವುದು ಯುವ ಪೀಳಿಗೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದ ಅವರು ಒಳಿತು ಮತ್ತು ಕೆಡಕಿನ ವ್ಯತ್ಯಾಸವನ್ನು ಅರಿಯದೆ ದಾರಿ ತಪ್ಪಬಹುದು” ಎಂದು ಎಚ್ಚರಿಸಿದ್ದಾರೆ.

ಸಿಎಂ ಯೋಗಿ ಆದಿತ್ಯನಾಥ್ ಅವರು, ಕಲೆ ಮತ್ತು ಸೃಜನಶೀಲತೆಯ ಹೆಸರಿನಲ್ಲಿ ಸಮಾಜದ ಮೌಲ್ಯಗಳನ್ನು ಬಲಿಗೊಡಬಾರದು, ಚಿತ್ರಗಳು ಕೇವಲ ಮನರಂಜನೆಯ ಸಾಧನವಾಗದೆ ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಿರಬೇಕು ಎಂದೂ ಹೇಳಿದರು. ಅವರು ಚಿತ್ರ ನಿರ್ಮಾಪಕರಿಗೆ ರಾಷ್ಟ್ರಭಕ್ತಿ, ಸಕಾರಾತ್ಮಕತೆ, ಸಾಂಸ್ಕೃತಿಕ ಪರಂಪರೆ ಮತ್ತು ರಾಷ್ಟ್ರೀಯ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟು ಕಥೆಗಳ ಆಯ್ಕೆ ಮಾಡುವಂತೆ ಸಲಹೆ ನೀಡಿದರು.
“ಸೃಜನಶೀಲರು ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕು. ಇಲ್ಲದಿದ್ದರೆ ಮುಂದಿನ ಪೀಳಿಗೆಯು ತಪ್ಪು ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಅಪಾಯವಿದೆ. ಮನರಂಜನಾ ಕ್ಷೇತ್ರವು ತನ್ನ ಶಕ್ತಿಯನ್ನು ಸಮಾಜದ ಸುಧಾರಣೆಗಾಗಿ ಬಳಸಬೇಕು” ಎಂದು ಅವರು ಮನವಿ ಮಾಡಿದರು.