ಬೆಂಗಳೂರು, ಏ. 04 (DaijiworldNews/TA): ರಶ್ಮಿಕಾ ಮಂದಣ್ಣ ತಮ್ಮ ಪ್ರತಿಭೆ, ಕೌಶಲ್ಯ ಮತ್ತು ವಿಶಿಷ್ಟ ಚಾತುರ್ಯದ ಮೂಲಕ ಭಾರತದ ಚಿತ್ರರಂಗದಲ್ಲಿ ಅತ್ಯಂತ ಜನಪ್ರಿಯ ನಟಿಯೊಬ್ಬರಾಗಿ ಹೆಸರುವಾಸಿಯಾಗಿದ್ದಾರೆ. ಯಾವುದೇ ಸಿನೆಮಾ ಹಿನ್ನೆಲೆ ಇಲ್ಲದೆ, ಅವರು ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ನಿರಂತರವಾಗಿ ಹಿಟ್ ಚಿತ್ರಗಳನ್ನು ನೀಡುತ್ತಿರುವುದರಿಂದ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ತಮ್ಮ ಅಭಿನಯದ ಮೂಲಕ ಅವರು ಜನಮನ ಗೆದ್ದಿದ್ದಾರೆ ಮತ್ತು ಬಹಳ ಬೇಗನೆ ಪ್ರೇಕ್ಷಕರ ಹೃದಯದಲ್ಲಿ ತಮ್ಮ ಸ್ಥಾನವನ್ನು ಪಡೆದವರು. ಈ ಅಭಿನಯಗಳಿಗಾಗಿ ಅಭಿಮಾನಿಗಳು ಅವರಿಗೆ ಪ್ರೀತಿಯಿಂದ “ನ್ಯಾಷನಲ್ ಕ್ರಶ್” ಎಂಬ ಖ್ಯಾತಿಯನ್ನು ನೀಡಿದ್ದಾರೆ. ಕನ್ನಡದ ಮನೆಮಗಳು ರಶ್ಮಿಕಾ ತೆಲುಗು ಸೊಸೆಯಾಗಿ ಹೊಸ ಜವಬ್ದಾರಿಗೆ ಅಣಿಯಾಗುತ್ತಿದ್ದಂತೆ ಅದೃಷ್ಟ ಮತ್ತಷ್ಟು ಕುಲಾಯಿಸಿದೆ.

ಇತ್ತೀಚೆಗೆ ಅವರು ತಮ್ಮ ಅಭಿನಯಕ್ಕೆ `ಗದ್ದರ್` ಚಿತ್ರದ ಮೂಲಕ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ಆದರೆ ಇದಕ್ಕೂ ಹೆಚ್ಚಿನ ಗಮನ ಸೆಳೆದದ್ದು, ಅವರು ಜಪಾನ್ನಲ್ಲಿ ನಡೆಯಲಿರುವ ಕ್ರಂಚೈರೋಲ್ ಅನಿಮೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎರಡನೇ ಬಾರಿ ಹಾಜರಾಗುತ್ತಿದ್ದಾರೆ. 2024 ರಲ್ಲಿ ಅವರು ಮೊದಲ ಬಾರಿಗೆ ಈ ವೇದಿಕೆಯಲ್ಲಿ ಮಿಂಚಿದ್ದರು ಮತ್ತು ಈಗ ಎರಡನೇ ಬಾರಿ ಈ ಅನಿಮೆ ಪ್ರಶಸ್ತಿಯನ್ನು ಪಡೆಯುವ ಮೂಲಕ ಭಾರತದ ಚಿತ್ರರಂಗದ ಮೊದಲ ಸೆಲೆಬ್ರಿಟಿಯಾಗಿ ದಾಖಲೆ ನಿರ್ಮಿಸಿದ್ದಾರೆ. ರಶ್ಮಿಕಾ ಎರಡು ಬಾರಿ ಈ ಗೌರವವನ್ನು ಪಡೆದ ಮೊದಲ ಭಾರತೀಯ ಚಲನಚಿತ್ರ ಸೆಲೆಬ್ರಿಟಿ ಎಂಬ ದಾಖಲೆಯನ್ನು ಸೃಷ್ಟಿಸಿದ್ದಾರೆ. ಅನಿಮೇಟೆಡ್ ಚಲನಚಿತ್ರಗಳು ಮತ್ತು ವೆಬ್ ಸರಣಿಗಳಲ್ಲಿ ಪ್ರತಿಭೆಯನ್ನು ತೋರಿಸಿದವರಿಗೆ ನೀಡಲಾಗುವ ಈ ಪ್ರಶಸ್ತಿಗಳ 10 ನೇ ಆವೃತ್ತಿಯು ಮೇ 23 ರಂದು ಟೋಕಿಯೊದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ, ಅವರು ಹಾಲಿವುಡ್ ಸೆಲೆಬ್ರಿಟಿಗಳೊಂದಿಗೆ ವಿಜೇತರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.
ರಶ್ಮಿಕಾ ಮಂದಣ್ಣ ಜಪಾನ್ನಲ್ಲಿ ಬಹಳ ಕ್ರೇಜ್ ಹೊಂದಿದ್ದಾರೆ, ರಶ್ಮಿಕಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇವರ ಪ್ರಮುಖ ಸಿನಿಮಾಗಳಲ್ಲಿ ಪುಷ್ಪ 1 ಮತ್ತು 2, ಕುಬೇರ, ಗರ್ಲ್ಫ್ರೆಂಡ್, ತಮ್ಮಾ ಮುಂತಾದವು ಸೇರಿವೆ. ಇವುಗಳಲ್ಲಿ ಅವರು ತಮ್ಮ ಅಭಿನಯ ಶೈಲಿಯಿಂದ ಪ್ರೇಕ್ಷಕರ ಮನಸ್ಸು ಗೆದ್ದಿದ್ದಾರೆ. ಪ್ರಸ್ತುತ ಅವರು ಮೈಸಾ ಮತ್ತು ರಣಬಲಿ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.